ಧಾರವಾಡಕ್ಕೆ ತಡರಾತ್ರಿ ಬಸ್ ಸೌಲಭ್ಯ, ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿದ ಸಂಸ್ಥೆ

Published on

ಹುಬ್ಬಳ್ಳಿ: ನಗರದಿಂದ ಧಾರವಾಡಕ್ಕೆ ರಾತ್ರಿ 11ರ ನಂತರ ಬಸ್ ಸೌಲಭ್ಯ ಇಲ್ಲದೇ ಪ್ರಯಾಣಿಕರು ಅನುಭವಿಸುತ್ತಿದ್ದ ಯಾತನೆಗೆ ವಾಯವ್ಯ ಸಾರಿಗೆ ಸಂಸ್ಥೆ ಸ್ಪಂದಿಸಿದೆ.

ನಿತ್ಯ ರಾತ್ರಿ 11.15, 11.30 ಹಾಗೂ 11.45ಕ್ಕೆ ಒಂದರಂತೆ ಹುಬ್ಬಳ್ಳಿ ರೈಲು ನಿಲ್ದಾಣದ ಬಿಆರ್ಟಿಎಸ್ ನಿಲುಗಡೆಯಿಂದ ಧಾರವಾಡಕ್ಕೆ ಬಸ್ ಓಡಿಸಲು ಸಂಸ್ಥೆ ಮುಂದಾಗಿದೆ. ಈ ವ್ಯವಸ್ಥೆಯನ್ನು ಮೇ 16ರಿಂದಲೇ ಜಾರಿಗೆ ತರಲಾಗಿದೆ.

ಹುಬ್ಬಳ್ಳಿ -ಧಾರವಾಡ ಮಾರ್ಗದಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಧಾರವಾಡ ಕಡೆಗೆ ತಡರಾತ್ರಿ ಸಂಚಾರದ ಅನುಕೂಲತೆ ಕಲ್ಪಿಸುವಂತೆ ಸಾರ್ವಜನಿಕರಿಂದ ಬೇಡಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಹುಬ್ಬಳ್ಳಿ&-ಧಾರವಾಡ ಅವಳಿನಗರಗಳ ಮಧ್ಯೆ ತಡರಾತ್ರಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ.

ರಾತ್ರಿ 11ರ ನಂತರ ಧಾರವಾಡಕ್ಕೆ ಸಾರಿಗೆ ಸಂಸ್ಥೆಯ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದರು. ಧಾರವಾಡ ಮಾರ್ಗದಲ್ಲಿರುವ ಉಪನಗರಗಳಿಗೆ ಹಾಗೂ ಧಾರವಾಡಕ್ಕೆ ಹೋಗಬೇಕಾದರೆ ಆಟೋ, ಕ್ಯಾಬ್ ಇತರ ವಾಹನಗಳು ಬೇಕಾಬಿಟ್ಟಿ ಹಣ ಕೀಳುತ್ತಿದ್ದರು.

ಅನೇಕ ಜನರು ದುಬಾರಿ ದರ ಕೊಟ್ಟು ಊರಿಗೆ ಹೋಗಲಾಗದೇ ಹುಬ್ಬಳ್ಳಿಯಲ್ಲಿಯೇ ಉಳಿದು ಬೆಳಗ್ಗೆ ಹೋದವರೂ ಇದ್ದಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ವಿಜಯವಾಣಿಯು "ಚಿಗರಿ ಸೌಲಭ್ಯ ರಾತ್ರಿ ಬಸ್ ಅಲಭ್ಯ' ಶೀಷಿರ್ಕೆಯಡಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ವಿಜಯವಾಣಿ ವರದಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಸಾರಿಗೆ ಸಂಸ್ಥೆಯು ಜನರಿಗಾಗಿ ರಾತ್ರಿ ವೇಳೆಯೂ ಬಸ್ ಹೆಚ್ಚಿಸಬೇಕೆಂದು ಆಗ್ರಹವನ್ನೂ ಮಾಡಿದ್ದರು.

ಈ ಎಲ್ಲ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಧಾರವಾಡಕ್ಕೆ ಪ್ರತಿದಿನ ರಾತ್ರಿ 11ರ ನಂತರ 15 ನಿಮಿಷಕ್ಕೆ ಒಂದರಂತೆ ಮೂರು ಬಸ್ಗಳನ್ನು ಓಡಿಸಲಿದೆ. ಈ ಬಸ್ಗಳು ಬಿಆರ್ಟಿಎಸ್ ಕಾರಿಡಾರ್ ಪಕ್ಕದ ಮಿಶ್ರಪಥದಲ್ಲಿ ಸಂಚರಿಸಲಿವೆ. ಸಾರ್ವಜನಿಕ ಪ್ರಯಾಣಿಕರು ಇದರ ಪ್ರಯೋಜನ ಪಡೆಯಬೇಕೆಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net