

ಹನುಮಸಾಗರ: ತಂದೆ ತಾಯಿ ಮತ್ತು ಗುರು ಹಿರಿಯರನ್ನು ಗೌರವದಿಂದ ಕಾಣಬೇಕೆಂದು ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ ಹೇಳಿದರು. ಸಮೀಪದ ಹನುಮನಾಳ ಶರಣಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ವಯಸ್ಸು ಶಾಶ್ವತವಲ್ಲ. ಎಲ್ಲರಿಗೂ ಮುಪ್ಪು ಬರುತ್ತದೆ. ಆದ್ದರಿಂದ ಪಾಲಕರನ್ನು ಮನೆಯಿಂದ ಹೊರ ಹಾಕದೆ ಸುಖದಿಂದ ಇಟ್ಟುಕೊಳ್ಳಬೇಕು. ಭಕ್ತಿಯಿಂದ ದೇವರನ್ನು ಆರಾಧಿಸಿಬೇಕೇ ಹೊರತು ಪುಣ್ಯಸ್ಥಳಗಳನ್ನು ಸುತ್ತಿ ಅಲ್ಲ. ಸತಿ ಪತಿಗಳಿಬ್ಬರೂ ಸುಖದಿಂದ ಬಾಳಬೇಕಾದರೆ ಅವರಿಬ್ಬರೂ ಪ್ರತೇಕ ಮೊಬೈಲ್ ಬಳಸಬಾರದು. ಇದರಿಂದ ಇಂದು ಅನೇಕ ಕುಟುಂಬಗಳು ಒಡೆಯುತ್ತಿದ್ದು, ಸತಿಪತಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಉತ್ತಮ ಸಂಸಾರ ಸಾಗಿಸುವತ್ತ ಗಮನಹರಿಸಬೇಕೆಂದರು.
ಕುದರಿಮೋತಿಯ ವಿಜಯಮಹಾಂತ ಸ್ವಾಮೀಜಿ ಮಾತನಾಡಿ, ಭಕ್ತಿಗಿಂತ ಯಾವುದು ದೊಡ್ಡದಿಲ್ಲ. ಇಂದು ಜಗತ್ತಿನಲ್ಲಿ ಗುರು ಮತ್ತು ದೇವರನ್ನೇ ಎದುರಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ. ಇದರಿಂದ ಮಾನವಕುಲ ಅವನತಿಯತ್ತ ಸಾಗುತ್ತಿದೆ ಎಂದರು. ಜಾತ್ರೆ ನಿಮಿತ್ತ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹವನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರಮುಖ ಬೀದಿಗಳಲ್ಲಿ 101 ಕುಂಭ ಮೆರವಣಿಗೆ ನಡೆಸಿ ನಂತರ ದೇವಸ್ಥಾನದಲ್ಲಿ ಕುಂಭಾಬಿಷೇಕ ನಡೆಸಲಾಯಿತು. ನಂತರ 12 ಜೋಡಿಗಳ ಸಾಮೂಹಿಕ ವಿವಾಹ ಜರುಗಿದವು. ಬೃಹ್ನಮಠದ ಪಂಚಾಕ್ಷರ ಶಿವಾಚಾರ್ಯರು, ಶಾಂತವೀರ ಸ್ವಾಮೀಜಿ, ಜಿಪಂ ಸದಸ್ಯ ನೇಮಣ್ಣ ಮೇಲಸಕ್ರಿ, ತಾಪಂ ಸದಸ್ಯ ಅಂದಪ್ಪ ತಳವಾರ, ಗ್ರಾಪಂ ಉಪಾಧ್ಯಕ್ಷ ಸಿದ್ದಪ್ಪ ರೊಟ್ಟಿ ಇತರರಿದ್ದರು.