

ನಂಜನಗೂಡು : ಶ್ರೀವೀರಾಂಜನೇಯ ಧರ್ಮ ಜಾಗೃತಿ ಬಳಗದಿಂದ ಶನಿವಾರ ಆಯೋಜಿಸಿದ್ದ ಹನುಮ ಜಯಂತಿ ಅಂಗವಾಗಿ ಅಲಂಕೃತ ಆಂಜನೇಯ ಸ್ವಾಮಿ ಮೂರ್ತಿಯ ವಿಗ್ರಹದೊಂದಿಗೆ ಆಕರ್ಷಕ ಕಲಾತಂಡಗಳ ಭವ್ಯ ಮೆರವಣಿಗೆ ನಡೆಯಿತು. ಸಾಗರೋಪಾದಿಯಲ್ಲಿ ಆಗಮಿಸಿದ ಹನುಮ ಭಕ್ತರು ಕುಣಿದು ಕುಪ್ಪಳಿಸುವ ಮೂಲಕ ಮೆರವಣಿಗೆ ಕಳೆಗಟ್ಟಿತು.
ನಗರದ ಶ್ರೀಕಂಠೇಶ್ವರಸ್ವಾಮಿ ದೇಗುಲದ ಮುಂಭಾಗದಲ್ಲಿ ಬೃಹದಾಕಾರದ ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕ ಬಿ.ಹರ್ಷವರ್ಧನ್, ಮೂಳೆ ತಜ್ಞ ಡಾ.ಎಸ್.ಶ್ರೀಕಾಂತ್, ಮಲ್ಲನಮೂಲೆ ಮಠದ ಕಿರಿಯ ಶ್ರೀಗಳು ಹನುಮ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. 10ನೇ ವರ್ಷದ ಹನುಮೋತ್ಸವ ಆಗಿದ್ದರಿಂದ ಈ ಬಾರಿ ವಿಜೃಂಭಣೆಯಿಂದ ಜರುಗಿತು.
ಓಂಕಾರಾಕೃತಿಯೊಂದಿಗಿನ 8 ಅಡಿ ಎತ್ತರದ ಹನುಮ, ಮೂವ್‌ಮೆಂಟ್ ಹನುಮಾನ್, ಕಂಚಿನ ಹನುಮ ವಿಗ್ರಹಗಳು ಮಂಗಳವಾದ್ಯಗೋಷ್ಠಿಯೊಂದಿಗೆ ಸಾಗಿದರೆ, 10 ಅಡಿ ಎತ್ತರದ ಶ್ರೀರಾಮನ ಮೂರ್ತಿ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿತ್ತು. ಇತ್ತ ಕೇರಳದಿಂದ ಆಗಮಿಸಿದ್ದ ಸಿಂಗಾರಿ ಮೇಳ ತಂಡದ ದೈವನಾಚಿಂ ಕಲಾವಿದರ ಚಂಡೆವಾದ್ಯ ಮೆರವಣಿಗೆಯ ರಂಗು ತಂದಿತು. 10 ಅಡಿ ಎತ್ತರದ ಹನುಮ, ಶಿವ, ಪಾರ್ವತಿ, ದುರ್ಗೆ ವೇಷಧಾರಿಗಳಾಗಿ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು.
ಉಳಿದಂತೆ ವೀರಗಾಸೆ, ಪೂಜಾ ಕುಣಿತ, ಕಂಸಾಳೆ, ನಂದಿಧ್ವಜ, ಗಾರುಡಿ ಗೊಂಬೆ ಕಲಾತಂಡಗಳ ಪ್ರದರ್ಶನ ಮೆರಗು ಹೆಚ್ಚಿಸಿತು. ನಗಾರಿ ಸದ್ದಿಗೆ ಯುವಕರು ಕುಣಿದು ಸಂಭ್ರಮಪಟ್ಟರು. ಯುವತಿಯರು ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಕುಣಿದು ಕುಪ್ಪಳಿಸಿದರು. ಇನ್ನು ಅಲ್ಲಲ್ಲಿ ಬೃಹದಾಕಾರದ ಹನುಮ ಹಾಗೂ ಶ್ರೀರಾಮನ ಪರದೆಗಳನ್ನು ರಸ್ತೆಗಳಲ್ಲಿ ಪ್ರದರ್ಶಿಸುತ್ತಿದ್ದರೆ ಹನುಮ ಭಕ್ತರಿಂದ ಹರ್ಷೋದ್ಘಾರ ಮೊಳಗಿತು.
ಯುವಕರು ಸಾಮೂಹಿಕವಾಗಿ ಕೇಸರಿ ಟೀ ಶರ್ಟ್ ಧರಿಸಿ ಮೆರವಣಿಗೆಯುದ್ದಕ್ಕೂ ಕೇಸರಿ ಬಾವುಟ, ಓಂಕಾರ ಬಾವುಟಗಳನ್ನು ಪ್ರದರ್ಶಿಸುತ್ತಾ ಸಾಗಿದರು. ಯಾತ್ರೆ ಸಾಗುವ ಮಾರ್ಗವೆಲ್ಲ ಕೇಸರಿ ಬಂಟಿಂಗ್‌ಗಳು ರಾರಾಜಿಸುತ್ತಿದ್ದವು. ಪಟಾಕಿ ಸಿಡಿಮದ್ದುಗಳ ಸದ್ದು ಮೊಳಗಿತು. ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನಿಂತಿದ್ದರು. ಅಲ್ಲಲ್ಲಿ ಮಜ್ಜಿಗೆ, ಪಾನಕ, ನೀರು, ಪ್ರಸಾದ ವಿತರಣೆ ಮಾಡುವ ಮೂಲಕ ಭಕ್ತರಿಗೆ ದಾಹ, ಹಸಿವು ನೀಗಿಸಿದರು. ಮೆರವಣಿಗೆಯು ರಾಷ್ಟ್ರಪತಿ ರಸ್ತೆ, ಎಂಜಿಎಸ್ ರಸ್ತೆ, ಬಜಾರ್ ರಸ್ತೆ, ಅಂಗಡಿ ಬೀದಿಯಲ್ಲಿ ಸಂಚರಿಸಿತು. ಡಿವೈಎಸ್ಪಿ ಜಿ.ಎಸ್.ರಘು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. 1500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಿಕೊಳ್ಳಲಾಗಿತ್ತು. ಇದಕ್ಕೂ ಮುನ್ನ ಹನುಮ ಜಯಂತಿ ಅಂಗವಾಗಿ ಮಾರುತಿ ಗುಡ್ಡದಲ್ಲಿರುವ ಪರ್ವತಾಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ಮಹಾಮಂಗಳಾರತಿ ನೆರವೇರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.