ಕುಮರಿ ನಾರಾಯಣಪುರದಲ್ಲಿ ಐವರು ಬಾಲಕರ ನಾಪತ್ತೆ ಪ್ರಕರಣ ಸುಖಾಂತ್ಯ

police searching to bosy
ಗೋಂಧಿ ಸಮೀಪದ ಭದ್ರಾ ನಾಲೆಯಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು.
Published on

ಶಿವಮೊಗ್ಗ: ಭದ್ರಾವತಿ ತಾಲೂಕಿನ ಕುಮರಿ ನಾರಾಯಣಪುರದಲ್ಲಿ ಮೀನು ಹಿಡಿಯಲು ಹೋಗಿದ್ದ ಐವರು ಬಾಲಕರ ನಾಪತ್ತೆ ಪ್ರಕರಣ ಸೋಮವಾರ ಬೆಳಗಿನಜಾವ ಸುಖಾಂತ್ಯ ಕಂಡಿದೆ. ಐವರು ಮಕ್ಕಳೂ ಸುರಕ್ಷಿತವಾಗಿದ್ದು ಪಾಲಕರು ನಿಟ್ಟುಸಿರು ಬಿಟ್ಟಿದ್ದಾರೆ.

ಭದ್ರಾವತಿಯ ಕುಮರಿ ನಾರಾಯಣಪುರದ 8ರಿಂದ 14 ವರ್ಷದೊಳಗಿನ ಬಾಲಕರು ಗೋಂಧಿ ಸಮೀಪದ ಭದ್ರಾ ನಾಲೆಯಲ್ಲಿ ಮೀನು ಹಿಡಿಯಲು ಭಾನುವಾರ ತೆರಳಿದ್ದರು. ಸ್ಥಳೀಯರೊಬ್ಬರು ಮಧ್ಯಾಹ್ನ ಗಮನಿಸಿ ಬೈದು ಅಲ್ಲಿಂದ ಕಳುಹಿಸಿದ್ದರು. ಪಾಲಕರ ಭಯದಿಂದ ಮನೆಗೆ ಹೋಗಲು ಹೆದರಿದ ಬಾಲಕರು ಸಮೀಪದ ತೋಟವೊಂದರಲ್ಲಿ ಅಡಗಿಕೊಂಡಿದ್ದರು.

ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪಾಲಕರು ಊರಿನ ಪರಿಚಯಸ್ಥರು, ಸಂಬಂಧಿಗಳ ಮನೆಗಳು ಸೇರಿ ಗ್ರಾಮದೆಲ್ಲೆಡೆ ಹುಡುಕಾಟ ನಡೆಸಿದ್ದರು. ಎಲ್ಲಿಯೂ ಮಕ್ಕಳ ಸುಳಿವು ಪತ್ತೆಯಾಗಿರಲಿಲ್ಲ. ಆತಂಕಗೊಂಡ ಪಾಲಕರು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದರು. ಅಲರ್ಟ್ ಆದ ಪೊಲೀಸರು ಕೆರೆಕಟ್ಟೆ, ನಿರ್ಜನ ಪ್ರದೇಶಗಳು, ಬಸ್, ರೈಲ್ವೆ ನಿಲ್ದಾಣ ಸೇರಿ ಹಲವೆಡೆ ಶೋಧ ನಡೆಸಿದ್ದರು. ಮತ್ತೊಂದೆಡೆ, ಪಾಲಕರು ಹಾಗೂ ಗ್ರಾಮಸ್ಥರು ರಾತ್ರಿಯಿಡಿ ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇದು ಪಾಲಕರಲ್ಲಿ ಮತ್ತಷ್ಟು ಆತಂಕ ಮೂಡಿಸಿತ್ತು.

ನಿಟ್ಟುಸಿರು ಬಿಟ್ಟ ಪಾಲಕರು: ಮೀನು ಹಿಡಿಯಲು ಹೋಗಿದ್ದ ವಿಷಯ ತಿಳಿದರೆ ಪಾಲಕರು ಬೈಯುತ್ತಾರೆಂಬ ಭಯದಲ್ಲಿ ಗ್ರಾಮದ ಹೊರವಲಯದ ತೋಟದ ಮನೆಯೊಂದರ ಬಳಿ ರಾತ್ರಿ ಬಾಳೆ ಎಲೆ ಹಾಸಿಕೊಂಡು ಮಕ್ಕಳು ಮಲಗಿದ್ದರು. ಸೋಮವಾರ ಬೆಳಗಿನಜಾವ ಪತ್ತೆಯಾಗಿದ್ದು ಪಾಲಕರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ರಾತ್ರಿಯಿಡಿ ಹುಡುಕಾಟ ನಡೆಸಿದ್ದ ಪೊಲೀಸರು !

ಐವರು ಮಕ್ಕಳ ನಿಗೂಢ ಪ್ರಕರಣ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು. ಭದ್ರಾವತಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಜಗದೀಶ್ ಹಂಚಿನಾಳ್, ಪಿಎಸ್‌ಐ ಮಹೇಶ್ ಮತ್ತವರ ಸಿಬ್ಬಂದಿ ತಡರಾತ್ರಿಯವರೆಗೂ ಗ್ರಾಮಸ್ಥರ ನೆರವಿನೊಂದಿಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಟ ನಡೆಸಿದ್ದರು. ನಂತರ ಮುಂಜಾನೆ 5 ಗಂಟೆಯಿಂದ ಮತ್ತೆ ಶೋಧ ಕಾರ್ಯಾಚರಣೆ ನಡೆಸಲಾರಂಭಿಸಿದ್ದರು. ಮಕ್ಕಳ ಇರುವಿಕೆಯ ಸುಳಿವು ಲಭ್ಯವಾಗುತ್ತಿದ್ದಂತೆ ಪೊಲೀಸರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net