ನಗರಸಭೆ ಕಚೇರಿ ನೌಕರನ ನಿಂದನೆ ಪ್ರಕರಣ ಸುಖಾಂತ್ಯ

18-KGL-3,,,,
ನಗರಸಭೆ ಕಚೇರಿ ನೌಕರನನ್ನು ನಗರಸಭೆ ಸದಸ್ಯ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದರು ಎಂಬ ಆರೋಪ ಪ್ರಕರಣ ಸಂಬಂಧ ಬುಧವಾರ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಸ್ಥಳೀಯ ಶಾಖಾ ಹಂಗಾಮಿ ಅಧ್ಯಕ್ಷ ನಂಜುಂಡಶೆಟ್ಟಿ ಹಾಗೂ ಸದಸ್ಯ ಪ್ರಕಾಶ್ ಹಸ್ತಲಾಘವ ಮಾಡಿದ ಬಳಿಕ ಪ್ರಕರಣ ಸುಖಾಂತ್ಯ ಕಂಡಿತು.
Published on

ಕೊಳ್ಳೇಗಾಲ: ನಗರಸಭೆ ಕಚೇರಿ ಸೀನಿಯರ್ ಪ್ರೋಗ್ರಾಮರ್ ಪುರುಷೋತ್ತಮ್ ಅವರನ್ನು ನಗರಸಭೆ ಸದಸ್ಯ ಪ್ರಕಾಶ್ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಸ್ಥಳೀಯ ಶಾಖಾ ಹಂಗಾಮಿ ಅಧ್ಯಕ್ಷ ನಂಜುಂಡಶೆಟ್ಟಿ, ನಗರಸಭೆ ಪೌರಾಯುಕ್ತರಿಗೆ ದೂರು ನೀಡಿದ್ದ ಪ್ರಕರಣ ಬುಧವಾರ ಸುಖಾಂತ್ಯ ಗೊಂಡಿದೆ.

ನಗರಸಭೆ ಸದಸ್ಯ ಪ್ರಕಾಶ್ ಅಹವಾಲಿನ ಮೇರೆಗೆ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ನೇತೃತ್ವದಲ್ಲಿ ಕೆಲ ಸದಸ್ಯರು, ನಗರಸಭೆ ಕಚೇರಿ ನೌಕರರ ಸಮ್ಮುಖದಲ್ಲಿ ಬುಧವಾರ ನಗರಸಭೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗಲಾಟೆ ಪ್ರಕರಣ, ಬಳಿಕ ದೂರು ನೀಡದ ಕುರಿತು ಸುದೀರ್ಘ ಚರ್ಚೆ ನಡೆಯಿತು.

ನಗರಸಭೆ ಸದಸ್ಯ ಪ್ರಕಾಶ್ ಮಾತನಾಡಿ, ಬಾಲಾಜಿ ಅವರ ಬಿ-ಖಾತೆ ಕಡತಕ್ಕೆ ಸಂಬಂಧಿಸಿದಂತೆ ನೌಕರ ಪುರುಷೋತ್ತಮ್ ಅವರನ್ನು ಭೇಟಿ ಮಾಡಿದ್ದಾಗ ಪುರುಷೋತ್ತಮ್ ಅವರ ಮೇಲೆ ಮೊಬೈಲ್ ಎಸೆದು ದೌರ್ಜನ್ಯ ಎಸಗಿ ಹಲ್ಲೆ ಮಾಡಿದ್ದೇನೆ ಎಂದು ದೂರು ನೀಡಲಾಗಿದೆ. ಈ ಕೂಡಲೇ ಸಿಸಿ ಟಿವಿ ಪರಿಶೀಲನೆ ನಡೆಸಿ, ನಾನು ಹಲ್ಲೆ ಮಾಡಿದ್ದರೆ ಆ ತಪ್ಪಿಗೆ ರಾಜೀನಾಮೆ ನೀಡುತ್ತೇನೆ. ವಿನಾಕಾರಣ ನನ್ನ ಮೇಲೆ ದೂರಿದ್ದಾರೆ. ಅಲ್ಲದೆ, ಆರ್‌ಐ ರಾಘವೇಂದ್ರ ಅವರಿಗೆ ಕಡತ ವಿಚಾರಕ್ಕೆ ಫೋನ್ ಮಾಡಿ ಮಾತನಾಡಿ ಕೇಳಿದರೆ ನೀವು ರೌಡಿಯಂತೆ ವರ್ತಿಸುತ್ತಿದ್ದೀರಿ ಎಂದು ಹೇಳುತ್ತಾರೆ ಎಂದರು.

ಸ್ಥಳದಲ್ಲಿದ್ದ ಆರ್‌ಐ ರಾಘವೇಂದ್ರ ಮಾತನಾಡಿ, ರೌಡಿ ಪದ ಬಳಸಿಲ್ಲ ಎಂದು ಸಮಾಜಾಯಿಷಿ ನೀಡಿದರು. ಈ ವೇಳೆ ಕೆಲವು ನಗರಸಭೆ ಸದಸ್ಯರು ಪ್ರತಿಕ್ರಿಯಿಸಿ, ಅಧಿಕಾರಿಗಳು ಹಾಗೂ ಸದಸ್ಯರು ಎರಡು ಕಣ್ಣುಗಳಿದ್ದಂತೆ ನಾವೆಲ್ಲರೂ ಒಗ್ಗೂಡಿ ಸಾರ್ವಜನಿಕರ ಕೆಲಸ ಮಾಡಬೇಕು. ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಕೊನೆಗೆ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ನೌಕರ ಪುರುಷೋತ್ತಮ್ ಅವರನ್ನು ಫೋನ್ ಕರೆ ಮಾಡಿ ಮನವೊಲಿಸಿದರು. ನಂತರ ನೌಕರ ಪುರುಷೋತ್ತಮ್ ಅವರು ದೂರವಾಣಿ ಮೂಲಕ ಪ್ರಕಾಶ್ ಅವರಿಗೆ ಕ್ಷಮೆ ಕೇಳಿದರು. ನಗರಸಭಾ ಸದಸ್ಯ ಪ್ರಕಾಶ್ ಮತ್ತು ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಸ್ಥಳೀಯ ಶಾಖಾ ಹಂಗಾಮಿ ಅಧ್ಯಕ್ಷ ನಂಜುಂಡಶೆಟ್ಟಿ ಪರಸ್ಪರ ಹಸ್ತಲಾಘವ ಮಾಡಿದ ಬಳಿಕ ಪ್ರಕರಣ ಸುಖಾಂತ್ಯಗೊಂಡಿತು.

ಗದ್ದಲ: ಸಭೆ ನಡೆಯುವಾಗ ಸದಸ್ಯರು ಕೂಗಾಡುವುದನ್ನು ನೋಡಿ ಸಾರ್ವಜನಿಕರು ಕಚೇರಿಯೊಳಗೆ ಆಗಮಿಸಿದರು. ಈ ವೇಳೆ ಸಭೆಯ ಫೋಟೋವನ್ನು ಬಿಜೆಪಿ ಮುಖಂಡರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಮುಂದಾದ ವಿಚಾರಕ್ಕೆ ನಗರಸಭೆ ಅಧಕ್ಷೆ ರೇಖಾ ರಮೇಶ್ ವಿರೋಧ ವ್ಯಕ್ತಪಡಿಸಿದರು. ಗಲಾಟೆ ಮಾಹಿತಿ ತಿಳಿದ ಪಿಎಸ್‌ಐ ಬಿ.ವರ್ಷಾ ಅವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿದರು.

ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮತಿ ಅಧ್ಯಕ್ಷ ಸುರೇಶ್, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net