ಬುಜ್ಜಿ ಭೀಮಗೆ ಜನ್ಮದಿನ ಸಂಭ್ರಮ

ಮಹಾಲಿಂಗಪುರದ ರೈತ ಸಿದ್ದು ಧರಿಗೌಡರ ಅವರು ತಾವು ಸಾಕಿದ ಕೋಣದ ಜನ್ಮದಿನ ಆಚರಿಸಿ ಸಂಭ್ರಮಿಸಿದರು.
ಮಹಾಲಿಂಗಪುರದ ರೈತ ಸಿದ್ದು ಧರಿಗೌಡರ ಅವರು ತಾವು ಸಾಕಿದ ಕೋಣದ ಜನ್ಮದಿನ ಆಚರಿಸಿ ಸಂಭ್ರಮಿಸಿದರು.
Published on

ಮಹಾಲಿಂಗಪುರ: ಪಟ್ಟಣದ ರೈತರೊಬ್ಬರು ತಾವು ಸಾಕಿದ ಕೋಣಕ್ಕೆ 2ನೇ ವರ್ಷದ ಜನ್ಮದಿನವನ್ನು ಇತ್ತೀಚೆಗೆ ಸಂಭ್ರಮದಿಂದ ಆಚರಿಸಿ ಗಮನ ಸೆಳೆದಿದ್ದಾರೆ.

ಇಲ್ಲಿನ ರೈತ ಸಿದ್ದು ಧರಿಗೌಡರ ಸಾಕಿದ ಬುಜ್ಜಿ ಭೀಮ ಎಂಬ ಹೆಸರಿನ ಕೋಣವೇ ಜನ್ಮದಿನ ಆಚರಿಸಿಕೊಂಡಿದೆ.

ರೈತ ತಾನು ಸಾಕಿದ ಎಮ್ಮೆ ಹಾಕಿದ ಗಂಡು ಕರುವಿಗೆ ಬುಜ್ಜಿ ಭೀಮ ಹೆಸರಿಟ್ಟು ಮನೆ ಸದಸ್ಯನಂತೆ ಪ್ರೀತಿಯಿಂದ ಸಾಕಿದ್ದಾರೆ. ಜನ್ಮ ದಿನದಂದು ಅದರ ಮೈ ತೊಳೆದು, ಬಣ್ಣ ಬಣ್ಣದ ಹಗ್ಗ, ರಿಬ್ಬನ್, ಹೂಮಾಲೆಯಿಂದ ಅಲಂಕರಿಸಿ, ಕೋಣದ ಭಾವಚಿತ್ರವುಳ್ಳ ಬ್ಯಾನರ್, ಪೆಂಡಾಲ್ ಹಾಕಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದ್ದಾರೆ. ರೈತರು, ಬೀಗರನ್ನು ಆಹ್ವಾನಿಸಿ ಊಟ ಮಾಡಿಸಿ ಸಂಭ್ರಮಿಸಿದ್ದಾರೆ.

ಆನೆಯಲ್ಲ, ಅಜಾನುಬಾಹು ಕೋಣ: ಕೇವಲ ಎರಡೇ ವರ್ಷದ ಕೋಣ ನಾಲ್ಕೈದು ವರ್ಷದಂತೆ ಕಾಣುತ್ತಿದೆ. ಇದಕ್ಕೆ ಮೇವಿನೊಂದಿಗೆ ನಿತ್ಯ 6 ಲೀಟರ್ ಹಾಲು, 3 ಕೆಜಿ ಹಿಂಡಿ, 2 ಕೆಜಿ ಹಿಟ್ಟು, ಆಗಾಗ ಸೇಬುಹಣ್ಣುಗಳನ್ನು ತಿನ್ನಿಸುತ್ತಾರೆ. ಜತೆಗೆ ನಿತ್ಯ 3 ಕಿ.ಮೀ.ವಾಕಿಂಗ್ ಮಾಡಿಸುವುದು ವಿಶೇಷವಾಗಿದೆ. ಕಾಳಜಿಯಿಂದ ಮೇಯಿಸಿದ್ದರಿಂದಾಗಿ ದಷ್ಟಪುಷ್ಟವಾಗಿ ಬೆಳೆದು ಆನೆಯಂತೆ ಕಾಣುತ್ತಿದೆ. ಸಾಮಾನ್ಯ ಕೋಣ ನಾಲ್ಕೈದು ವರ್ಷದ ನಂತರ ಯಾವ ಗಾತ್ರ ಬೆಳೆಯುತ್ತದೆಯೋ ಆ ಗಾತ್ರದಷ್ಟು ಎರಡೇ ವರ್ಷದಲ್ಲಿ ಬೆಳೆದಿರುವುದು ವಿಶೇಷ. ಈ ಕೋಣದ ಅಂದ ಚೆಂದಕ್ಕೆ ಬೆರಗಾಗಿ ಯುವಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಕೋಣ ಖರೀದಿಸಲು ಬಂದರೂ ನಾವು ಮಾರಾಟ ಮಾಡಿಲ್ಲ. ನಾವು ಮಾರಾಟ ಮಾಡುವ ಉದ್ದೇಶದಿಂದ ಸಾಕಿಲ್ಲ. ಪ್ರೀತಿಯಿಂದ ಸಾಕಿದ್ದೇವೆ. ಸದ್ಯಕ್ಕೆ ಮಾರುವುದಿಲ್ಲ ಎನ್ನುತ್ತಿದ್ದಾರೆ ರೈತ ಸಿದ್ದು.

ಈ ಕೋಣ ನಮ್ಮ ಕುಟುಂಬದ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಯಾರಿಗೂ ಹಾಯುವುದಿಲ್ಲ. ಇದರ ಮಾನವೀಯ ಗುಣ ನಮಗೆ ಹಿಡಿಸಿದೆ. ಮನೆಯ ಸದಸ್ಯರಂತೆ ಅದಕ್ಕೂ ಜನ್ಮದಿನ ಆಚರಿಸಿ ಸಂಭ್ರಮಿಸಿದ್ದೇವೆ ಎಂದ ಅವರು, ಮುಂದಿನ ದಿನಗಳಲ್ಲಿ ಕೃಷಿಮೇಳದಲ್ಲಿ ಹಮ್ಮಿಕೊಳ್ಳುವ ಜಾನುವಾರು ಪ್ರದರ್ಶನಕ್ಕೆ ಈ ಬುಜ್ಜಿ ಭೀಮನನ್ನು ಕರೆದೊಯ್ಯುವ ಇಚ್ಛೆ ವ್ಯಕ್ತಪಡಿಸಿದರು. ರೈತ ಸಿದ್ದು ಅವರ ಕಾರ್ಯಕ್ಕೆ ಸಹೋದರ ಶ್ರೀಶೈಲ ಸಾಥ್ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net