

ಕವಲೂರು: ಸಂತಸ, ಖುಷಿಯ ಜೀವನದಿಂದ ಆರೋಗ್ಯ ಪ್ರಾಪ್ತಿ ಆಗಲಿದೆ. ಕಾರಣ ಕೋಪ, ತಾಪಗಳನ್ನು ಕಡಿಮೆ ಮಾಡಿಕೊಳ್ಳಬೇಕು ದೈಹಿಕ ಚಟುವಟಿಕೆಯಿಂದ ಜೀವನ ನಡೆಸಿ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ,ಪರ್ವತಗೌಡ ಹಿರೇಗೌಡ್ರ ತಿಳಿಸಿದರು.
ಗ್ರಾಮದಲ್ಲಿ ಜಿಲ್ಲಾ ಆಯುಷ್ ಇಲಾಖೆ, ಗ್ರಾಮ ಪಂಚಾಯತ ಕವಲೂರು ಹಾಗೂ ಮುಂಡರಗಿಯ ಶ್ರಿ,ಷ,ಬ್ರ,ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಯುರ್ವೆದಿಕ್ ಮಹಾವಿದ್ಯಾಲಯದ ವತಿಯಿಂದ ಮಂಗಳವಾರ ನರೇಗಾ ಕಾಮಗಾರಿ ಸ್ಥಳದಲ್ಲಿ ನಡೆದ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪರಿಶ್ರಮದ ಬದುಕನ್ನು ಕಟ್ಟಿಕೊಳ್ಳಬೇಕು ಇದು ಆರೋಗ್ಯವನ್ನು ಸದೃಡವಾಗಡಲಿದೆ. ಜೊತೆಗೆ ದುಶ್ಚಟಗಳು ನಿಮ್ಮ ಜೀವನವನ್ನು ಹಾಳು ಮಾಡಲಿವೆ ಕಾರಣ ದುಶ್ಚಟಗಳನ್ನು ಬಿಡಬೇಕು ಇವು ಸಂಸಾರದಲ್ಲಿ ಗೊಂದಲವನ್ನು ಉಂಟು ಮಾಡಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆ. ಆರೋಗ್ಯಕರ ಜೀವನಕ್ಕೆ ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಿ. ಎಲ್ಲರಿಗೂ ಒಳ್ಳೆದನ್ನು ಬಯಸಬೇಕು ನಾವು ಕೂಡ ಒಳ್ಳೆಯ ವಿಚಾರ ಅಳವಡಿಸಿಕೊಳ್ಳಬೇಕು ಭಗವಂತನ ನಾಮಸ್ಮರಣೆ ಮಾಡಬೇಕು. ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳಬೇಕು ಇದರಿಂದ ಸಂಗ್ರಹಿತ ನೀರನ್ನು ಬಳಸಬೇಕು, ಅನಗತ್ಯ ನೀರನ್ನು ಪೋಲು ಮಾಡಬೇಡಿ. ಜೀವಜಲದ ಸದ್ಭಳಕೆ ಮಾಡಿಕೊಳ್ಳಿ ಹಾಗೂ ಗಿಡ ನೆಟ್ಟು ಬೆಳೆಸಿ ಎಂದರು.
ಪಿಡಿಓ ಅನಿತಾ ಕಿಲ್ಲೇದ ಮಾತನಾಡಿ, ಜನ ಸಾಮಾನ್ಯರಿಗೂ ತಮ್ಮ ಕಾಯಿಲೆ ಬಗ್ಗೆ ತಿಳಿಯಲು ಹಾಗೂ ಉತ್ತಮ ಚಿಕಿತ್ಸೆ ದೊರೆಯಬೇಕಾದರೆ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಇದರಿಂದ ಜನಸಾಮಾನ್ಯರ ಆರ್ಥಿಕ ಉಳಿತಾಯ ಆಗಲಿದೆ ಎಂದರು.
ಕಾರ್ಯದರ್ಶಿ ಸಣ್ಣಜಂಬಣ್ಣ, ಡಾ,ಮುತ್ತು ಹಡಪದ, ಡಾ,ಗಾನಶ್ರೀ, ಡಾ,ಪ್ರಿಯಾ, ಡಾ,ಅನಿತಾ, ಡಾ,ಅಪೂರ್ವ, ಡಾ,ಮುಸ್ಕಾನಾ, ಡಾ,ಸುಯೇಶ, ಡಾ,ಕಿಶೋರ ಪ್ರಮುಖರಾದ ಶಾಂತಮ್ಮ, ರವಿ ಹಾಗೂ ಗ್ರಾಪಂ ಸಿಬ್ಬಂದಿ, ಕೂಲಿ ಕಾರ್ಮಿಕರು ಇದ್ದರು.