

ಹುಬ್ಬಳ್ಳಿ: ಧರ್ಮದ ಬಗ್ಗೆ ಹೇಳುವುದು ಅತಿ ಸುಲಭ. ಆದರೆ, ತಿಳಿದುಕೊಂಡು ಆಚರಣೆಗೆ ತರುವುದು ಅತ್ಯಂತ ಕಷ್ಟದ ಕೆಲಸವೆಂದು ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಶ್ರೀ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ಶ್ರೀ ರಘುವಿಜಯತೀರ್ಥ ಶ್ರೀಪಾದಂಗಳು ಅನುಗ್ರಹ ಸಂದೇಶ ನೀಡಿದರು.
ಸಮೀಪದ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಉದಯಗಿರಿಯ ಶ್ರೀ ಹನುಮಂತ ಪುರಾಣಿಕರ ನಿವಾಸದಲ್ಲಿ ಸೋಮವಾರ ಏರ್ಪಡಿಸಿದ್ದ ಅಧಿಕ ಮಾಸದ ಮಹತ್ವ ಕುರಿತ ವಿಶೇಷ ಉಪನ್ಯಾಸ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೇದ ಹಾಗೂ ಸ್ಕೃತಿಗಳಲ್ಲಿ ತಿಳಿಸಿರುವಂಥ ದಾನ-ಧರ್ಮ, ಯಜ್ಞ-ಯಾಗಾದಿ, ಜಪ-ತಪ, ಕಥಾ-ಶ್ರವಣ, ಮನನ-ಕೀರ್ತನ, ಆತ್ಮ ನಿವೇದನ ಮುಂತಾದ ಭಕ್ತಿ ಮಾರ್ಗದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಧರ್ವಚರಣೆಯಿಂದಲೆ ಸುಖ-ಶಾಂತಿ ಪ್ರಾಪ್ತಿಯಾಗಲಿದೆ ಎಂದರು.
ತೊರವಿಗಲ್ಲಿ ರಾಯರ ಮಠದ ಪಂ. ನರಹರಿ ಆಚಾರ್ಯ ವಾಳ್ವೇಕರ ಮಾತನಾಡಿ, ಮೂರು ವರ್ಷಕ್ಕೆ ಬರುವ ಅಧಿಕ ಮಾಸವು ಪುರುಷೋತ್ತಮ ಮಾಸವೆಂದು ಪ್ರಸಿದ್ಧ. ಈ ಮಾಸದಲ್ಲಿ ಆಚರಿಸುವ ಎಲ್ಲ ಸತ್ಕರ್ಮಗಳು ಅಧಿಕ ಪುಣ್ಯದಾಯಿಕವಾಗುತ್ತವೆ ಎಂದು ತಿಳಿಸಿದರು.
ಪೂಜ್ಯರಿಗೆ ಪೂರ್ಣ ಕುಂಭದೊಂದಿಗೆ ಸ್ವಾಗತ, ಪಾದಪೂಜೆ ಮಾಡಲಾಯಿತು. ಬಳಗದ ಸದಸ್ಯರಿಂದ ಪಾರಾಯಣ, ಸುಮಂಗಲೆಯರಿಂದ ತಾರತಮ್ಮ ಭಜನೆ, 33 ದಂಪತಿಗಳಿಗೆ ಸತ್ಕರಿಸಲಾಯಿತು.
ರಘೂತ್ತಮ ಅವಧಾನಿ, ಕೃಷ್ಣ ಹುನಗುಂದ, ಶ್ರೀನಿವಾಸ ಪಟ್ಟಣಕೋಡಿ, ಡಾ. ಶ್ರೀನಾಥ ಕೆ.ಎಂ., ಪ್ರೊ. ವಾಮನ ಭಾದ್ರಿ, ಗಿರೀಶ ಪಾಟೀಲ, ಪ್ರಕಾಶ ದೇಸಾಯಿ, ವೆಂಕಟೇಶ ಕುಲಕರ್ಣಿ, ಅನಿಲ ದೇಶಪಾಂಡೆ, ಎಲ್.ವಿ. ಜೋಶಿ, ವಿಠ್ಠಲ ಅಂಬೇಕರ, ವಾದಿರಾಜಾಚಾರ್ಯ, ಸಂಜೀವ ಜೋಶಿ, ವಿಲಾಸ ಸಬನೀಸ, ಉದಯ ದೇಶಪಾಂಡೆ, ಪ್ರಶಾಂತ ಕುಲಕರ್ಣಿ ಇತರರು ಇದ್ದರು.