ಗುಡ್ಡಗಾಡು ಮಕ್ಕಳ ಶಿಕ್ಷಣಕ್ಕೆ ಎಚ್‌ಎಎಲ್ ನೆರವು

SHANTHA MALLIKARJUNA SWAMY(1)
Published on

ಸಾಲೂರು ಮಠದ ಶಿಕ್ಷಣ ಸಂಸ್ಥೆಯೊಡನೆ 4.77 ಕೋಟಿ ರೂ. ಒಡಂಬಡಿಕೆ ಸಹಿ

ವಸತಿ ಶಾಲೆ ನಿರ್ಮಾಣಕ್ಕೆ ಸಾಮಾಜಿಕ ಹೊಣೆಗಾರಿಕೆ ನಿಧಿ ಕೊಡುಗೆ

ಹನೂರು : ಮಲೆ ಮಹದೇಶ್ವರ ಬೆಟ್ಟದ ಗುಡ್ಡಗಾಡು ಮಕ್ಕಳಿಗೆ ಶಿಕ್ಷಣ ನೀಡುವ ಮಹತ್ವದ ಉದ್ದೇಶದಿಂದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಕೋಟ್ಯಂತರ ರೂ. ನೆರವಿನ ಹಸ್ತ ಚಾಚಿದೆ.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಧಾರ್ಮಿಕ ಪರಂಪರೆಯನ್ನು ಸಾರುತ್ತಿರುವ, ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಸಾಲೂರು ಬೃಹನ್ಮಠದ ಶಿಕ್ಷಣ ಸಂಸ್ಥೆಯೊಡನೆ ಬೆಟ್ಟದ ದುರ್ಗಮ ಗುಡ್ಡಗಾಡು ಪ್ರದೇಶದ ಬುಡಕಟ್ಟು ಸಮುದಾಯಗಳ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಿಸುವ ಸಲುವಾಗಿ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ 4.77 ಕೋಟಿ ರೂ.ವೆಚ್ಚದಲ್ಲಿ ವಿದ್ಯಾರ್ಥಿನಿಲಯ ನಿರ್ಮಿಸಲು ಒಡಂಬಡಿಕೆ ಮಾಡಿಕೊಳ್ಳುತ್ತಿದೆ. ಈ ಒಡಂಬಡಿಕೆ ಪತ್ರಕ್ಕೆ ಶುಕ್ರವಾರ ಎಚ್‌ಎಎಲ್ ಮತ್ತು ಶ್ರೀ ಸಾಲೂರು ಮಠದ ಶಿಕ್ಷಣ ಸಂಸ್ಥೆಗಳ ನೇತೃತ್ವ ವಹಿಸಿರುವ ಡಾ. ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಎಚ್‌ಎಎಲ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಡಿ.ಕೆ ಸುನಿಲ್, ಕಾರ್ಯಾರಣಾ ನಿರ್ದೇಶಕ ಕೆ.ರವಿ, ಹಣಕಾಸು ನಿರ್ದೇಶಕ ಬಿ.ಸೇತನಾಪತಿ, ಮಾನವ ಸಂಪನ್ಮೂಲ ನಿರ್ದೇಶಕ ಎಂ.ಜಿ.ಬಾಲಸುಬ್ರಹ್ಮಣ್ಯ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ, ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಡಾ.ಶರತ್ ಚಂದ್ರ ಸ್ವಾಮಿಜಿ, ಮೈಸೂರು ವಿ.ವಿಯ ಹಿರಿಯ ಪ್ರಾಧ್ಯಾಪಕ ಡಾ. ಡಿ.ಎಸ್.ಗುರು, ಶಿಕ್ಷಣ ಸಂಸ್ಥೆಯ ಸದಸ್ಯ ಪೊನ್ನಾಚಿ ಮಹದೇವಸ್ವಾಮಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಆಶಾಕಿರಣ:

ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲೂ, ಮಲೆ ಮಹದೇಶ್ವರ ಬೆಟ್ಟ ಪ್ರದೇಶದ 18 ಹಳ್ಳಿಗಳು ವಿದ್ಯುತ್ ಮತ್ತು ರಸ್ತೆಯಂತಹ ಮೂಲಸೌಕರ್ಯಗಳ ಕೊರತೆ ಅನುಭವಿಸುತ್ತಿವೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕಾಡಿನ ದಾರಿಯಲ್ಲಿ, ಬೆಟ್ಟಗಳನ್ನೇರಿ, ವಿದ್ಯಾಭ್ಯಾಸಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗುವ ಅನಿವಾರ್ಯತೆ ಇದೆ. ಈ ಕಷ್ಟದಿಂದಾಗಿ ಮತ್ತು ಶೈಕ್ಷಣಿಕ ಅವಕಾಶಗಳ ಕೊರತೆಯಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಆದರೆ, ಈಗ ನಿರ್ಮಾಣಗೊಳ್ಳಲಿರುವ ನೂತನ ವಸತಿ ನಿಲಯ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಲಿದೆ.

ಗ್ರಾಮೀಣ ಶಿಕ್ಷಣದ ಅಭಿವೃದ್ಧಿಗೆ ಮೈಲುಗಲ್ಲು:

ಐತಿಹಾಸಿಕ ಶ್ರೀಸಾಲೂರು ಮಠದಲ್ಲಿ ಸಹಿ ಹಾಕಲಾದ ಒಡಂಬಡಿಕೆ ಪತ್ರ ಗ್ರಾಮೀಣ ಶಿಕ್ಷಣದ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕೃಪಾ ಶಿಕ್ಷಣ ಸಂಸ್ಥೆ ಎಚ್‌ಎಎಲ್ ಒದಗಿಸುವ ಹಣಕಾಸಿನ ನೆರವನ್ನು ಕಾರ್ಯರೂಪಕ್ಕೆ ತರಲಿದೆ. ಬುಡಕಟ್ಟು ಸಮುದಾಯಗಳ, ಅದರಲ್ಲೂ ಮಲೆ ಮಹದೇಶ್ವರ ಬೆಟ್ಟ ಪ್ರಾಂತ್ಯದ ಗುಡ್ಡಗಳಲ್ಲಿರುವ 18 ಹಳ್ಳಿಗಳ ಬೇಡಗಂಪಣ ಮತ್ತು ಸೋಲಿಗ ಸಮುದಾಯಗಳ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣದ ಅವಶ್ಯಕತೆ ಬಹಳಷ್ಟಿದ್ದು, ಇದನ್ನು ಒದಗಿಸುವ ನಿಟ್ಟಿನಲ್ಲಿ ವಸತಿ ನಿಲಯ ನಿರ್ಮಾಣ ಕಾಮಗಾರಿ ತಕ್ಷಣವೇ ಆರಂಭಗೊಳ್ಳಲಿದೆ. ಈ ಭೂ ಪ್ರದೇಶ ಬಹಳ ಸವಾಲಿನದಾಗಿದ್ದು, ಸುದೀರ್ಘ ಅವಧಿಯಿಂದಲೂ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಅಡಚಣೆಯಾಗಿ ಪರಿಣಮಿಸಿದೆ. ಆದರೆ, ನೂತನ ವಸತಿ ನಿಲಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಕೂಲವಾಗಲಿದೆ.

ಬೆಳಕು ಪಸರಿಸುತ್ತಿರುವ ಶ್ರೀಮಠ:

1964ರಲ್ಲಿ ಆರಂಭಗೊಂಡ ಶ್ರೀಮಲೆ ಮಹದೇಶ್ವರ ಸ್ವಾಮಿ ಕೃಪಾ ಶಿಕ್ಷಣ ಸಂಸ್ಥೆ ಈ ಪ್ರದೇಶದಲ್ಲಿ ಶಿಕ್ಷಣದ ಬೆಳಕನ್ನು ಪಸರಿಸುತ್ತಾ ಬಂದಿದೆ. 21 ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಒದಗಿಸುತ್ತಿದ್ದು, ಅದರೊಡನೆ ಸಂಸ್ಕೃತ, ಯೋಗ, ಲಲಿತಕಲೆಗಳು, ಮತ್ತು ಸಾಂಸ್ಕೃತಿಕ ಅಧ್ಯಯನಗಳನ್ನು ಒದಗಿಸುತ್ತಿವೆ. ಈ ಮೂಲಕ ಮಠ ಸಂಪೂರ್ಣ ಶಿಕ್ಷಣದ ವಾತಾವರಣವನ್ನು ನಿರ್ಮಿಸಿದೆ. ಮಠ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳು, ಗೋಶಾಲೆಗಳನ್ನು ನಡೆಸುತ್ತಿದ್ದು, ಲಕ್ಷಾಂತರ ಭಕ್ತರು ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ದಾಸೋಹ ನಡೆಸುತ್ತಿದೆ. ಪರಿಸರ ಜಾಗೃತಿ ಮತ್ತು ಎಲ್ಲರನ್ನೂ ಒಳಗೊಂಡ ಸಾಮಾಜಿಕ ಜಾಗೃತಿಯ ಕುರಿತು ಮಠ ಒತ್ತು ನೀಡುತ್ತಿದೆ.

ಕೋಟ್..

ಈ ಒಪ್ಪಂದವು ಭಾರತದ ತಾಂತ್ರಿಕ ಸಾಮರ್ಥ್ಯ ಮತ್ತು ಆಧ್ಯಾತ್ಮಿಕ ಪರಂಪರೆಗಳ ನಡುವಿನ ಬಲವಾದ ಹೊಂದಾಣಿಕೆಗೆ ಸಾಕ್ಷಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮುನ್ನುಡಿ ಬರೆದಿದೆ, ಪ್ರತಿಷ್ಠಿತ ಸಂಸ್ಥೆ ಎಚ್‌ಎಎಲ್ ಈ ದಿಕ್ಕಿನಲ್ಲಿ ಸಹಾಯಹಸ್ತ ನೀಡಿರುವುದು ಶ್ಲಾಘನೀಯ ಹಾಗೂ ಅಭಿನಂದನೀಯ.

ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಸಾಲೂರು ಬೃಹನ್ಮಠ, ಮಹದೇಶ್ವರ ಬೆಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net