

ಹನೂರು: ಪಟ್ಟಣದ ಮೂಲಕ ರಾಮಾಪುರ ಮಾರ್ಗವಾಗಿ ನಾಲ್‌ರೋಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಧಿಕ ತೂಕದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧವಿದ್ದರೂ ಆದೇಶ ಉಲ್ಲಂಘಿಸಿ ವಾಹನಗಳು ಸಂಚರಿಸುತ್ತಿವೆ. ಇದರಿಂದ ಹದಗೆಟ್ಟಿರುವ ರಸ್ತೆ ಮತ್ತಷ್ಟು ಹದಗೆಡಲು ಕಾರಣವಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಹನೂರಿನಿಂದ 22 ಕಿ.ಮೀ ಅಂತರದಲ್ಲಿರುವ ನಾಲ್‌ರೋಡ್ ಗ್ರಾಮ ತಾಲೂಕಿನ ಗಡಿಯಾಗಿದ್ದು, ಚೆಕ್‌ಪೋಸ್ಟ್ ಹೊಂದಿದೆ. ಇಲ್ಲಿಂದ ಗರಿಕೆಕಂಡಿ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿ ಇದ್ದು, ಅಜ್ಜೀಪುರ, ಮಂಚಾಪುರ, ರಾಮಾಪುರ ಮಾರ್ಗವಾಗಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹಾಗಾಗಿ ಈ ಮಾರ್ಗದಲ್ಲಿ ಹನೂರಿನಿಂದ ರಾಮಾಪುರದವರೆಗೆ ಕೆಲವು ಕಡೆಗಳಲ್ಲಿ ಹಾಳಾಗಿದ್ದ ರಸ್ತೆಯನ್ನು 3 ವರ್ಷದ ಹಿಂದೆ ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಲಾಗಿತ್ತು. ಜತೆಗೆ, ರಾಮಾಪುರದಿಂದ ನಾಲ್‌ರೋಡ್‌ವರೆಗೆ ನಿರ್ಮಾಣವಾಗಿದ್ದ ಗುಂಡಿಗಳಿಗೆ ತೇಪೆ ಹಾಕಲಾಗಿತ್ತು. ಆದರೆ ಅಧಿಕ ಸರಕು ಸಾಗಣೆ ಲಾರಿಗಳ ಸಂಚಾರದಿಂದ ಮತ್ತೆ ಗುಂಡಿಗಳು ಬಾಯ್ತೆರೆದಿವೆ.
ಮ.ಬೆಟ್ಟದ ಮಾರ್ಗದಲ್ಲಿ ಸಂಚರಿಸುತ್ತಿದ್ದ ಲಾರಿಗಳು: ಚಾಮರಾಜನಗರ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಬಣ್ಣಾರಿ-ದಿಂಬಂಘಾಟ್‌ನಲ್ಲಿ ಸತ್ಯಮಂಗಲಂ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವಿದ್ದು, ವನ್ಯಪ್ರಾಣಿಗಳ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕಳೆದ ಏಪ್ರಿಲ್‌ನಲ್ಲಿ ಮದ್ರಾಸ್ ಹೈಕೋರ್ಟ್ ದಿಂಬಂಘಾಟ್‌ನಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಿತ್ತು. ಅಲ್ಲದೆ, ವಾಣಿಜ್ಯ ಉದ್ದೇಶದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರ್ಬಂಧ ಹೇರಲಾಗಿತ್ತು. ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ 10-12 ಚಕ್ರದ ಲಾರಿಗಳು ಮ.ಬೆಟ್ಟದ ಮೂಲಕ ತಮಿಳುನಾಡಿಗೆ ಸಂಚರಿಸಲು ಪ್ರಾರಂಭಿಸಿದವು. ಪರಿಣಾಮ, ಮ.ಬೆಟ್ಟ ಮಾರ್ಗದ ರಸ್ತೆ ಸಂಪೂರ್ಣ ಹದಗೆಡುವುದರ ಜತೆಗೆ ಅಪಘಾತಗಳೂ ಸಂಭವಿಸುತ್ತಿತ್ತು. ಇದರಿಂದ ಭಕ್ತರು ತೊಂದರೆಪಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮ.ಬೆಟ್ಟದ ಮಾರ್ಗದಲ್ಲಿ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.
ಆದೇಶ ಉಲ್ಲಂಘಿಸಿ ಸಂಚಾರ: ಆದೇಶ ಹೊರಬಿದ್ದ ಬಳಿಕ ಮ.ಬೆಟ್ಟದ ಮೂಲಕ ತಮಿಳುನಾಡು ಹಾಗೂ ರಾಜ್ಯದ ಕಡೆಗೆ ಸಂಚರಿಸುತ್ತಿದ್ದ ಲಾರಿಗಳು ಹನೂರು ಪಟ್ಟಣದ ಮೂಲಕ ರಾಮಾಪುರ, ನಾಲ್‌ರೋಡ್ ಮಾರ್ಗವಾಗಿ ತಮಿಳುನಾಡಿಗೆ ಸಂಚರಿಸಲು ಆರಂಭಿಸಿದವು. ಇದರಿಂದ ಈ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಯಿತು. ಪರಿಣಾಮ, ರಸ್ತೆಯ ಅಲ್ಲಲ್ಲಿ ಡಾಂಬರು ಕಿತ್ತು ಬಂದಿದ್ದು, ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾದವು. ಇದರಿಂದ ವಾಹನ ಸಂಚಾರಕ್ಕೆ ತೊಡುಕಾಗಿ ಸವಾರರು ತೊಂದರೆ ಅನುಭವಿಸುವಂತಾಗಿತ್ತು.
ಇದನ್ನು ಮನಗಂಡ ಈ ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಕಳೆದ ಡಿಸೆಂಬರ್‌ನಲ್ಲಿ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದರು. ಆದಾಗ್ಯೂ ಆದೇಶವನ್ನು ಧಿಕ್ಕರಿಸಿ ಭಾರಿ ವಾಹನಗಳು ಸಂಚರಿಸುತ್ತಿದ್ದವು. ಇದಾದ ಬಳಿಕ ಜ.11 ರಂದು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹನೂರು ಪೊಲೀಸರು ಭಾರಿ ವಾಹನಗಳನ್ನು ತಡೆದು ವಾಪಸ್ ಕಳುಹಿಸಿದ್ದರು. ಆದರೀಗ ಲಾರಿಗಳು ಮತ್ತೆ ಸಂಚಾರ ಆರಂಭಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಾದರೂ ಸಂಬಂಧಪಟ್ಟವರು ಮೌನ ವಹಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಡಿವಾಣಕ್ಕೆ ಒತ್ತಾಯ:
ಈ ಮಾರ್ಗದಲ್ಲಿ ಭಾರದ ಮಿತಿ ಇಲ್ಲದ ಸರಕು ಸಾಗಣೆ ವಾಹನಗಳು ಹೆಚ್ಚು ಸಂಚರಿಸುತ್ತಿರುವುದು ರಸ್ತೆ ಹದಗೆಡಲು ಮುಖ್ಯ ಕಾರಣ. ಈ ವಾಹನಗಳ ಸಂಚಾರ ಹೀಗೆಯೇ ಮುಂದುವರಿದರೆ ರಸ್ತೆ ಇನ್ನಷ್ಟು ತೀವ್ರವಾಗಿ ಹದಗೆಡುತ್ತದೆ. ಇದರಿಂದ ಸಂಚಾರ ಕಷ್ಟವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ವಹಿಸಿ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆ ರಿಪೇರಿಗೆ ಆಗ್ರಹ: ಭಾರಿ ವಾಹನಗಳ ಸಂಚಾರದಿಂದ ರಸ್ತೆಯ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಪ್ರಸ್ತುತ ಕೆಲವು ಕಡೆಗಳಲ್ಲಿ ನೀರು ನಿಲ್ಲುವಂತಾಗಿದೆ. ಜತೆಗೆ, ಜಲ್ಲಿಕಲ್ಲುಗಳು ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿವೆ. ಇನ್ನೂ ಕೆಲವೆಡೆ ಡಾಂಬರು ಕಿತ್ತು ಬಂದಿದ್ದು, ರಸ್ತೆ ಕುಸಿಯುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅದರಲ್ಲೂ ಬೈಕ್ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಕೆಲವೊಂದು ವೇಳೆ ಜಲ್ಲಿಕಲ್ಲು ಹಾಗೂ ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ವಾಹನಗಳು ರಸ್ತೆ ಬಿಟ್ಟು ಅದರ ಬದಿಯಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ರಾಮಾಪುರದಿಂದ ನಾಲ್‌ರೋಡ್‌ವರೆಗೆ ರಸ್ತೆಯ ದುಸ್ಥಿತಿಯಂತೂ ಹೇಳತೀರದು. ಆದ್ದರಿಂದ ಪಿಡಬ್ಲುೃಡಿ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆಯನ್ನು ದುರಸ್ತಿಪಡಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಈ ಮಾರ್ಗದಲ್ಲಿ 12 ಚಕ್ರದ ಲಾರಿಗಳು ಹೆಚ್ಚು ಸಂಚರಿಸುತ್ತಿವೆ. ಇದರಿಂದ ರಸ್ತೆಯ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಹದಗೆಡುತ್ತಿದೆ. ಇದರಿಂದ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ವಾಹನಗಳಿಗೆ ಕಡಿವಾಣ ಹಾಕುವುದರ ಮೂಲಕ ಹದಗೆಟ್ಟ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು.ಮಾದೇಶ್ ರಾಮಾಪುರ ಗ್ರಾಮಸ್ಥ ಈ ಮಾರ್ಗದಲ್ಲಿ ಅಧಿಕ ಭಾರದ ವಾಹನಗಳ ಸಂಚಾರದಿಂದ ರಸ್ತೆ ಈಗಾಗಲೇ ಹಾಳಾಗಿದೆ. ಇದು ಹೀಗೆಯೇ ಮುಂದುವರಿದರೆ ಸ್ಥಳೀಯವಾಗಿ ಸಂಚರಿಸುವ ವಾಹನ ಸವಾರರು ತೊಂದರೆ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗಿದೆ.ಸದಾಶಿವಮೂರ್ತಿ, ಎಇಇ ಪಿಡಬ್ಯುಡಿ ಇಲಾಖೆ, ಮ.ಬೆಟ್ಟ