ಹಳ್ಳದ ಸೇತುವೆ ದುರಸ್ತಿಗೆ ಆಗ್ರಹ

Published on

ಹನೂರು: ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳಿಗನತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿನ ಉಡುತೊರೆಹಳ್ಳದ ಸೇತುವೆ ದುರಸ್ತಿಗೆ ಆಗ್ರಹಿಸಿ ಶನಿವಾರ ಗ್ರಾಮಸ್ಥರು ಕೆಸರಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು.


ಉಡುತೊರೆ ಹಳ್ಳದಲ್ಲಿ ಗಿಡಗಂಟಿಗಳು ಬೆಳೆದು ಹಾಗೂ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ನೀರು ಸರಾಗವಾಗಿ ಹರಿಯಲು ತೊಡಕಾಗಿದೆ. ಇದರಿಂದ ಜೋರು ಮಳೆಯಾದರೆ ಹಳ್ಳ ತುಂಬಿ ಹರಿಯುವುದರಿಂದ ಸೇತುವೆಯು ಶಿಥಿಲಗೊಂಡಿದೆ. ಅಲ್ಲದೆ ಸೇತುವೆ ಆಸುಪಾಸಿನಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಹೀಗಾಗಿ ಮಳೆಗಾಲದಲ್ಲಿ ಬಸ್ ಸಂಚಾರ ಕಡಿತಗೊಳ್ಳುತ್ತದೆ. ಇದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳಲು ತುಂಬಾ ತೊಂದರೆಪಡುವಂತಾಗಿದೆ. ರೈತರು ಜಾನುವಾರುಗಳನ್ನು ಕರೆದೊಯ್ಯಲು ಜೀವಭಯದಿಂದ ಹಳ್ಳ ದಾಟಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ದೂರಿದರು.


ಕಳೆದ 5 ತಿಂಗಳ ಹಿಂದೆ ಸಾರಿಗೆ ಬಸ್ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿದ್ದರು. ಶಿಥಿಲಗೊಂಡಿರುವ ಸೇತುವೆ ದುರಸ್ತಿಪಡಿಸುವಂತೆ ಸಂಬಂಧಪಟ್ಟ ಅಕಾರಿಗಳಿಗೆ, ಜನಪ್ರತಿನಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನಾದರೂ ಸಂಬಂಧಪಟ್ಟವರು ಸೇತುವೆ ದುರಸ್ತಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎನ್.ಕೃಷ್ಣಮೂರ್ತಿ, ಗ್ರಾಮಸ್ಥರಾದ ಪಾಪಣ್ಣ, ಶಿವಣ್ಣ, ಮಹದೇವಸ್ವಾಮಿ, ನಾಗಣ್ಣ, ಸೆಂದಿಲ್, ನಾಗೇಂದ್ರ, ನಾಗಮಣಿ ಮಹದೇವಮ್ಮ, ಶಶಿಕಲಾ, ಪ್ರೇಮಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net