ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಕ್ರಮ

PHONE IN
????????????????????????????????????
Published on

ಹನೂರು: ಚರಂಡಿ ಹಾಗೂ ಸಿಸಿ ರಸ್ತೆಯಿಲ್ಲದೇ ತೊಂದರೆಯಾಗುತ್ತಿದೆ. ಇ-ಸ್ವತ್ತು ಮಾಡುವಲ್ಲಿ ವಿಳಂಬವಾಗುತ್ತಿದೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಶೌಚಗೃಹ, ವಸತಿ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಬಸ್ ನಿಲ್ದಾಣದೊಳಗೆ ತಳ್ಳು ಗಾಡಿಗಳನ್ನು ತೆರವುಗೊಳಿಸಿ…


ಇದು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಜನತೆಯಿಂದ ಕೇಳಿ ಬಂದ ಪ್ರಮುಖ ಸಮಸ್ಯೆಗಳು. ಎಲ್ಲರ ಪ್ರಶ್ನೆಗಳಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ ತಾಳ್ಮೆಯಿಂದಲೇ ಉತ್ತರಿಸಿದರು. ಪಟ್ಟಣದ ವಿವಿಧ ವಾರ್ಡ್‌ಗಳಿಂದ 20ಕ್ಕೂ ಹೆಚ್ಚು ಜನ ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಪರಿಹಾರಕ್ಕೆ ಮನವಿ ಮಾಡಿದರು. ಎಲ್ಲರ ಸಮಸ್ಯೆಗಳನ್ನು ಸಮಾಧಾನಚಿತ್ತದಿಂದ ಆಲಿಸಿ ಉತ್ತರಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ, ತಕ್ಷಣದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಇನ್ನುಳಿದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಆರೋಗ್ಯ ನಿರೀಕ್ಷಕ ಬಾಲಸುಬ್ರಹ್ಮಣ್ಯಂ, ಪ್ರಭಾರ ಕಂದಾಯ ನಿರೀಕ್ಷಕ ಮಂಜುನಾಥ್, ದ್ವಿತೀಯ ದರ್ಜೆ ನೌಕರರಾದ ಮಾದೇಶ್, ಪ್ರತಾಪ್, ಮದನ್‌ಕುಮಾರ್ ಇದ್ದರು.

*ಸಿಸಿ ರಸ್ತೆ, ಚರಂಡಿ ನಿರ್ಮಿಸಿಕೊಡಿ
ಜಿ.ವಿ.ಗೌಡ ಕಾಲೇಜು ಸಮೀಪದ 10ನೇ ವಾರ್ಡ್‌ನ ವೆಂಕಟಾಚಲ ಮಾತನಾಡಿ, ಬಡಾವಣೆಯಲ್ಲಿ ಜನರು ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಆದರೆ ಸಿಸಿ ರಸ್ತೆ, ಚರಂಡಿ ನಿರ್ಮಿಸಿಲ್ಲ. ಹಾಗಾಗಿ ಮಳೆ ಬಂದ ವೇಳೆ ಗುಂಡಿಗಳಲ್ಲಿ ನೀರು ನಿಲ್ಲುತ್ತಿದೆ. ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಿಕೊಡಿ ಎಂದು ಮನವಿ ಮಾಡಿದರು.
9ನೇ ವಾರ್ಡಿನ ಮಾರುತಿ ನಗರದ ಲಕ್ಷ್ಮೀ ಅವರು ಕರೆ ಮಾಡಿ, ಸಿಸಿ ರಸ್ತೆ ಇಲ್ಲದ ಪರಿಣಾಮ ಗುಂಡಿಗಳು ನಿರ್ಮಾಣವಾಗಿವೆ. ಮಳೆಗಾಲದ ವೇಳೆ ನೀರು ನಿಲ್ಲುತ್ತದೆ. ಮಕ್ಕಳು ಆಯತಪ್ಪಿ ಜಾರಿ ಬಿದ್ದು ಗಾಯಗೊಂಡಿರುವ ಘಟನೆಗಳು ಜರುಗುತ್ತಲೇ ಇವೆ. ಆದ್ದರಿಂದ ರಸ್ತೆ ನಿರ್ಮಿಸುವಂತೆ ಕೋರಿದರು.
ಇದಕ್ಕೆ ಮುಖ್ಯಾಧಿಕಾರಿ ಮೂರ್ತಿ ಪ್ರತಿಕ್ರಿಯಿಸಿ, ಈ ಸಂಬಂಧ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ ಕ್ರಿಯಾಯೋಜನೆ ತಯಾರಿಸಲಾಗುವುದು. ಬಳಿಕ ಅನುದಾನ ಲಭ್ಯತೆ ಮೇರೆಗೆ ಆದ್ಯತೆ ನೀಡಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಕ್ರಮವಹಿಸಲಾಗುವುದು ಎಂದರು.

*ತಳ್ಳುವ ಗಾಡಿಗಳನ್ನು ತೆರೆವುಗೊಳಿಸಿ:
ಮಾರಿಗುಡಿ ಬೀದಿಯ ಮಾದೇಶ್ ಮಾತನಾಡಿ, ಪಪಂ ವತಿಯಿಂದ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಆದರೆ ಅಂಗಡಿ ಮುಂಭಾಗ ಹಾಗೂ ಆಸುಪಾಸಿನಲ್ಲಿ ಕೆಲವರು ತಳ್ಳುವ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಮಳಿಗೆಯನ್ನು ಪಡೆದವರಿಗೆ ವ್ಯಾಪಾರ ಅಗುತ್ತಿಲ್ಲ ಎಂದು ದೂರಿದರು.
ಬಾಡಿಗೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಹಿಂದೆ ತಳ್ಳುಗಾಡಿಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಮತ್ತೆ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಅಲವತ್ತುಕೊಂಡರು. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಮೂರ್ತಿ ಭರವಸೆ ನೀಡಿದರು.

*ಇ-ಸ್ವತ್ತು ಮಾಡಿಕೊಡಿ:
ಎ.ಜೆ. ಕಾಲನಿಯ ರಘು ಕರೆ ಮಾಡಿ, ಸ.ನಂ. 477ಕ್ಕೆ ಇ-ಸ್ವತ್ತು ಪಡೆಯಲು ಪ.ಪಂ.ಗೆ ಅರ್ಜಿ ಸಲ್ಲಿಸಿ 2 ವರ್ಷವೇ ಕಳೆದಿದೆ. ಆದರೆ ಇದುವರೆಗೂ ಇ ಸ್ವತ್ತು ಆಗಿಲ್ಲ ಎಂದು ದೂರಿದರು. ದೇವಾಂಗಪೇಟೆಯ ಹರೀಶ್ ಮಾತನಾಡಿ, ಸೊಪ್ಪನಕೇರಿ ಹಾಗೂ ದೇವಾಂಗಪೇಟೆಯಲ್ಲಿ ಕೆಲವರಿಗೆ ಮನೆ ಹಾಗೂ ನಿವೇಶನ ಸ್ವಾಧೀನದಲ್ಲಿದ್ದು, ನಮೂನೆ-3 ಇದೆ. ಆದರೆ ಇ ಸ್ವತ್ತು ಇಲ್ಲ. ಇದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಕಂದಾಯವನ್ನು ಪಡೆದು ಇ ಸ್ವತ್ತು ಮಾಡಿಕೊಡುವಂತೆ ಮನವಿ ಮಾಡಿದರು. ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.

*ಸಮರ್ಪಕ ಕುಡಿವ ನೀರು ಪೂರೈಸಿ:
ವಿನಾಯಕ ನಗರದ ಯದುಮೂರ್ತಿ, ಅಂತೋಣಿಸ್ವಾಮಿ ಕರೆ ಮಾಡಿ, ಬಡಾವಣೆಗೆ ಕಾವೇರಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಗುತ್ತಿಲ್ಲ. ಅಲ್ಲದೇ ಚರಂಡಿಯಲ್ಲಿ ಹೂಳು ತುಂಬಿದೆ. ಜತೆಗೆ ಸಿಸಿ ರಸ್ತೆ ಇಲ್ಲದ ಪರಿಣಾಮ ತುಂಬಾ ತೊಂದರೆಯನ್ನು ಎದುರಿಸುವಂತಾಗಿದೆ ಎಂದರು.
1ನೇ ವಾರ್ಡಿನ ಅಂಬೇಡ್ಕರ್ ನಗರದ ನಾಗರಾಜು ಎಂಬವರು ಕರೆ ಮಾಡಿ, ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸಿಸಿ ರಸ್ತೆ ನಿರ್ಮಾಣದ ಅಗತ್ಯವಿದೆ ಎಂದು ಹೇಳಿದರು.
ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ಈ ಬಗ್ಗೆ ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದರು.

*ಚರಂಡಿ ನಿರ್ಮಿಸಿಕೊಡಿ:
10ನೇ ವಾರ್ಡಿನ ಮಂಜೇಶ್ ಕರೆ ಮಾಡಿ, ಮುಖ್ಯ ರಸ್ತೆಯ ಬದಿಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ ಎಂದರು. ಶಂಕರ್ ಕರೆ ಮಾಡಿ ಚಿತ್ರಮಂದಿರದ ಹಿಂಭಾಗದ ಬಡಾವಣೆಯಲ್ಲಿ ಕೆಲವರು ಚರಂಡಿ ಹಾಗೂ ರಸ್ತೆಯನ್ನು ಅತಿಕ್ರಮಿಸಿಕೊಂಡು ಮನೆಯ ಮುಂಭಾಗ ಗೇಟ್ ಅಳವಡಿಸಿಕೊಂಡಿದ್ದಾರೆ. ಇದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗುವುದು ಎಂದು ಮುಖ್ಯಾಧಿಕಾರಿ ಮೂರ್ತಿ ತಿಳಿಸಿದರು.


*ಅನುದಾನ ಬಿಡುಗಡೆ ಮಾಡಿಸಿ:
ಎ.ಜೆ. ಕಾಲನಿಯ ಸಂತೋಷ್ ಮತ್ತು ವೆಂಕಟೇಶ್ ಕರೆ ಮಾಡಿ, ಶೌಚಗೃಹವನ್ನು ನಿರ್ಮಿಸಲಾಗಿದೆ. ಆದರೆ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ ಎಂದರು. ಅಂಬೇಡ್ಕರ್ ನಗರದ ಪುಟ್ಟಸ್ವಾಮಿ ಮಾತನಾಡಿ, ಬಡಾವಣೆಯಲ್ಲಿ ಕೆಲವರು ವಿವಿಧ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದರು. ಮುಖ್ಯಾಧಿಕಾರಿ ಮಾತನಾಡಿ, ಈ ವಿಷಯ ಗಮನಕ್ಕೆ ಬಂದಿದೆ. ಸರ್ಕಾರದಿಂದ ಅನುದಾನ ಮಂಜೂರಾದ ಕೂಡಲೇ ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ಇತ್ತರು.


*ಪೋಲಾಗುತ್ತಿರುವ ನೀರನ್ನು ತಡೆಗಟ್ಟಿ:
ಅಂಬೇಡ್ಕರ್ ಬಡಾವಣೆಯ ಸಂತೋಷ್ ಮಾತನಾಡಿ, ಬಡಾವಣೆಯ ತೊಂಬೆಯೊಂದಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಅದರೆ ಗೇಟ್‌ವಾಲ್ ಅಳವಡಿಸದ ಕಾರಣ ಕಳೆದ 6 ತಿಂಗಳಿನಿಂದ ನೀರು ಪೋಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಸದಸ್ಯರ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಈ ಬಗ್ಗೆ ಕೂಡಲೇ ಅಗತ್ಯ ಕ್ರಮವಹಿಸಿ ಇನ್ನೆರಡು ದಿನಗಳೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.


ೆನ್ ಇನ್ ಕಾರ್ಯಕ್ರಮದಲ್ಲಿ ಕೇಳಿ ಬಂದ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳೊಂದಿಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸ ಲಾಗುವುದು. ಕೂಡಲೇ ಬಗೆಹರಿಸಬಹುದಾದ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು. ಕೆಲವೊಂದು ಸಮಸ್ಯೆಗಳಿಗೆ ಅನುದಾನ ಲಭ್ಯತೆ ಮೇರೆಗೆ ಆದ್ಯತೆ ನೀಡಿ ಪರಿಹರಿಸಲು ಕ್ರಮ ವಹಿಸುವೆ.
>ಮೂರ್ತಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಹನೂರು.

ಕರೆ ಮಾಡಿದ ಇತರರು: ಜಿ.ವಿ ಗೌಡ ನಗರದ ಜೋಶ್ವಾ, ಆರ್.ಎಸ್. ದೊಡ್ಡಿಯ ಸುದರ್ಶನ್, ರಾಜು, ಅಂಬೇಡ್ಕರ್‌ನಗರದ ಸಂಪತ್‌ಕುಮಾರ್, ಬನ್ನಿಮಂಟಪ ಬಡಾವಣೆಯ ವಿಜಯ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net