ಸುಸೂತ್ರವಾಗಿ ಜಾತ್ರೆ ನಡೆಯಲು ಸಹಕಾರ ನೀಡಿ

10 HANUR 1
Published on

ಹನೂರು: ಜಾತ್ರೆ ಸುಸೂತ್ರವಾಗಿ ನೆರವೇರಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯ. ಆದ್ದರಿಂದ ವಹಿಸಿರುವ ಜವಾಬ್ದಾರಿಗಳನ್ನು ಮಾದಪ್ಪನ ಸೇವೆ ಎಂದು ಭಾವಿಸಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ತಿಳಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಸಭಾಂಗಣದಲ್ಲಿ ಬುಧವಾರ ದಸರಾ ಜಾತ್ರೆ ಸಂಬಂಧ ಅಗತ್ಯ ಸಿದ್ಧತೆ ಕುರಿತು ಆಯೋಜಿಸಿದ್ದ ಅಧಿಕಾರಿಗಳು ಹಾಗೂ ನೌಕರರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅ.11 ರಂದು ಮಹಾನವಮಿ ಹಾಗೂ 12 ರಂದು ವಿಜಯದಶಮಿ ಪೂಜೆ, ಕುದುರೆ ವಾಹನೋತ್ಸವ ಜರುಗಲಿದೆ. ಈ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ಹೆಚ್ಚಿನ ಭಕ್ತರು ಆಗಮಿಸಲಿದ್ದಾರೆ. ಹಾಗಾಗಿ ದಾಸೋಹ, ದೇವರ ದರ್ಶನ, ಪೂಜಾ ಕೈಂಕರ್ಯ, ಉತ್ಸಾವಾಧಿಗಳು, ಶೌಚಗೃಹಗಳ ನಿರ್ವಹಣೆ, ಸ್ವಚ್ಛತೆ, ಭದ್ರತೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಎಲ್ಲರಿಗೂ ಅವರದ್ದೆ ಆದ ಜವಾಬ್ದಾರಿಗಳನ್ನು ನೀಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ಲೋಪವಾಗದಂತೆ ಮುನ್ನಚ್ಚೆರಿಕೆ ಕ್ರಮ ವಹಿಸಬೇಕು. ಒಂದು ವೇಳೆ ಲೋಪ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಯಾವುದೇ ಕಾರಣಕ್ಕೂ ಇದಕ್ಕೆ ಆಸ್ಪದ ನೀಡಬೇಡಿ ಎಂದು ತಿಳಿಸಿದರು.

ದುರಸ್ತಿಗೆ ಕ್ರಮ:
ಕೆಲವು ವಸತಿ ಗೃಹಗಳು ಹಾಗೂ ಶೌಚಗೃಹಗಳು ದುರಸ್ತಿಯಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಹಾಗಾಗಿ ಭಕ್ತರಿಗೆ ಉತ್ತಮ ಸೌಕರ್ಯ ಒದಗಿಸುವುದು ಪ್ರಾಧಿಕಾರದ ಕರ್ತವ್ಯ. ಈ ಸಂಬಂಧ ಶಾಸಕರು ದುರಸ್ತಿಪಡಿಸುವಂತೆ ಸೂಚಿಸಿದ್ದಾರೆ. ಹಾಗಾಗಿ ಈ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದ್ದು ಜಾತ್ರೆ ಮುಗಿದ ಬಳಿಕ ಕಾಮಗಾರಿ ಆರಂಭಿಸಿ ಭಕ್ತರಿಗೆ ಉತ್ತಮ ಸೌಕರ್ಯ ಒದಗಿಸಲಾಗುವುದು. ಇನ್ನು ಮ.ಬೆಟ್ಟದಲ್ಲಿ ನಿಷೇಧಿಸಿದ್ದರೂ ಕೆಲವೆಡೆ ತಂಬಾಕು ಪದಾರ್ಥ, ಮದ್ಯ ಹಾಗೂ ಮಾಂಸ ಮಾರಾಟ ಮಾರಾಟ ನಡೆಯುತ್ತಲೇ ಇದೆ ಎಂಬುದರ ಬಗ್ಗೆ ದೂರಿದೆ. ಇದರಿಂದ ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗಲಿದೆ. ಆದ್ದರಿಂದ ಈ ಬಗ್ಗೆ ಕಂಡು ಬಂದರೆ ಮಾಹಿತಿ ತಿಳಿಸಿ. ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಸೌಕರ್ಯದ ಭರವಸೆ:
ಪ್ರಾಧಿಕಾರದ ಕಾಯಂ ನೌಕರರಿಗೆ 6ನೇ ವೇತನ ಶ್ರೇಣಿ ಅನ್ವಯ ವೇತನ ನೀಡಬೇಕಿದೆ. ಆದರೆ, ಕೆಲವರು ವೇತನ ಶ್ರೇಣಿ ಕೊಡಿಸುವುದಾಗಿ ನೌಕರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಆದ್ದರಿಂದ ಯಾರಿಗೂ ಸಹ ಹಣ ಕೊಡಬೇಕಿಲ್ಲ. ಈ ಬಗ್ಗೆ ಅಗತ್ಯ ಮುತುರ್ವಜಿ ವಹಿಸಿ ಪ್ರಾಧಿಕಾರದ ಬೈಲಾದಂತೆ ವೇತನ ನೀಡಲಾಗುವುದು. ಜತೆಗೆ ದೊರಕಬೇಕಾದ ಸೌಕರ್ಯ ಒದಗಿಸಲಾಗುವುದು. ಆದರೆ, ವಹಿಸಿರುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಪ್ರಮಾಣಿಕತೆಯಿಂದ ನಿರ್ವಹಿಸಬೇಕಷ್ಟೆ. ಮುಂದಿನ ದಿನಗಳಲ್ಲಿ ನೌಕರರ ಕುಂದು ಕೊರತೆ ಸಭೆ ಕರೆದು ಸಮಸ್ಯೆ ಆಲಿಸಿ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರುಶೇಖರ್, ಇಂಜಿನಿಯರ್ ಸೆಲ್ವ ಗಣಪತಿ, ನೌಕರರಾದ ಮಹದೇವಸ್ವಾಮಿ, ಸ್ವಾಮಿ, ಮಲ್ಲಿಕಾರ್ಜುನ, ಮಾದೇಶ್, ನಾಗರಾಜು, ಶಾಸ್ತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net