ಒತ್ತಡದಿಂದ ಮುಕ್ತಿ ಹೊಂದಲು ಕ್ರೀಡೆ ಸಹಕಾರಿ

24 HANUR 4
Published on

ಹನೂರು: ಸರ್ಕಾರಿ ನೌಕರರು ಕೆಲಸದ ಒತ್ತಡದಿಂದ ಮುಕ್ತಿ ಹೊಂದುವುದರ ಜತೆಗೆ ಮನರಂಜನೆ ಪಡೆಯಲು ಈ ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಡಿವೈಎಸ್ಪಿ ಸೋಮೇಗೌಡ ತಿಳಿಸಿದರು.

ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲೂಕು ಕ್ರಿಕೆಟ್ ಕ್ಲಬ್ ಹಾಗೂ ಸರ್ಕಾರಿ ನೌಕರರ ಸಂಘದ ವತಿಯಿಂದ 2 ದಿನಗಳ ಕಾಲ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ಒತ್ತಡದ ಬದುಕನ್ನು ನಿವಾರಿಸುತ್ತದೆ. ಈ ದಿಸೆಯಲ್ಲಿ ತಾಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಸರ್ಕಾರಿ ನೌಕರರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಶ್ಲಾಘನೀಯ. ಆದ್ದರಿಂದ ಪ್ರತಿಯೊಬ್ಬರೂ ಪಂದ್ಯಾವಳಿಯಲ್ಲಿ ಭಾಗವಹಿಸುವುದರ ಮೂಲಕ ಸಹಕಾರ ನೀಡಬೇಕು. ಜತೆಗೆ ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಬೇಕು ಎಂದು ಸಲಹೆ ನೀಡಿದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹ.ಮಾ ಗುರುಸ್ವಾಮಿ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಹಾಗಾಗಿ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರಿಕೆಟ್ ಕ್ಲಬ್ ಹಾಗೂ ಸರ್ಕಾರಿ ನೌಕರರ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ಇನ್ನಿತರ ಪಂದ್ಯಾವಳಿಯನ್ನು ಆಯೋಜಿಸುವುದರ ಮೂಲಕ ಸರ್ಕಾರಿ ನೌಕರರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಪಪಂ ಸದಸ್ಯ ಆನಂದ್, ಇನ್ಸ್‌ಪೆಕ್ಟರ್ ಶಶಿಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಜಿಲ್ಲಾ ಸಂಘದ ಖಜಾಂಚಿ ಚಂದ್ರಶೇಖರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಮಹದೇಶ್, ಕ್ರಿಕೆಟ್ ಕ್ಲಬ್ ಸಂಘದ ಅಧ್ಯಕ್ಷ ಅಭಿಲಾಷ್, ಗ್ರಾಮ ಲೆಕ್ಕಿಗ ಸಂಘದ ಅಧ್ಯಕ್ಷ ರಾಜು, ಸೆಸ್ಕ್, ಕಂದಾಯ, ಅರಣ್ಯ, ಅಗ್ನಿಶಾಮಕ, ಪೊಲೀಸ್ ಹಾಗೂ ಇನ್ನಿತರ ಇಲಾಖೆಯ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net