ಹೈನುಗಾರಿಕೆಯಿಂದ ಸಮೃದ್ಧ ಜೀವನ

oppo_2
oppo_2
Published on

ಹನೂರು: ಅವಿದ್ಯಾವಂತರಾದರೂ ಕೃಷಿಯಲ್ಲಿ ಉತ್ತಮ ಅನುಭವ ಹೊಂದಿರುವ ಇಲ್ಲೊಬ್ಬ ರೈತ ಹೈನುಗಾರಿಕೆ ಬಗ್ಗೆ ಒಲವು ಹೊಂದಿದ್ದು, ಇದೀಗ ಜಾನುವಾರುಗಳ ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಲೂಕಿನ ಚಿಕ್ಕಮಾಲಾಪುರ ಗ್ರಾಮದ ದಿ.ಮುತ್ತಯ್ಯನಾಯ್ಡು ಅವರ ಪುತ್ರ ಕುನ್ನಪ್ಪನಾಯ್ಡು (55) ಹೈನುಗಾರಿಕೆ ಬಗ್ಗೆ ಕಾಳಜಿ ಹೊಂದಿರುವ ರೈತ. ಪಿತ್ರಾರ್ಜಿತ ಆಸ್ತಿಯಾಗಿ ಕುನ್ನಪ್ಪನಾಯ್ಡುಗೆ ಒಂದೂವರೆ ಎಕರೆ ಜಮೀನು ಬಂದಿದ್ದು, ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. 35 ವರ್ಷದಿಂದ ವ್ಯವಸಾಯದಲ್ಲಿ ತೊಡಗಿರುವ ಇವರು ಬಾಲ್ಯದಲ್ಲಿಯೇ ತಂದೆಯ ಪ್ರೇರಣೆಯಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರು. ಹಾಗಾಗಿ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಲು ಆಗಲಿಲ್ಲ. ಕಾಲಾನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಬೇಸಾಯದಲ್ಲಿ ತೊಡಗಿಕೊಂಡ ಇವರು ಖುಷ್ಕಿ ಭೂಮಿಯಲ್ಲಿ ಮಳೆ ಆಶ್ರಯಿಸಿ ರಾಗಿ ಹಾಗೂ ಮುಸುಕಿನ ಜೋಳ ಬೆಳೆಯಲು ಆರಂಭಿಸಿದರು. ಇದರಿಂದ ಜೀವನೋಪಾಯಕ್ಕಷ್ಟೇ ಸಾಲುತ್ತಿತ್ತು. ಆದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ.

ಇದರಿಂದ ದೃಢ ನಿರ್ಧಾರವೊಂದಕ್ಕೆ ಬಂದ ಇವರು 4 ವರ್ಷಗಳ ಹಿಂದೆ ಜಮೀನಿನಲ್ಲಿ ಒಂದು ಕೊಳವೆ ಬಾವಿ ಕೊರೆಸಿದರು. ಇದರಿಂದ ಉತ್ತಮ ನೀರು ಲಭಿಸಿತು. ಬಳಿಕ ಕೃಷಿಯ ಬಗ್ಗೆ ಇನ್ನಷ್ಟು ಮುತುವರ್ಜಿ ವಹಿಸಿದ ಕುನ್ನಪ್ಪನಾಯ್ಡು ಕಡಿಮೆ ಭೂಮಿಯಲ್ಲೇ ಕಬ್ಬು, ಟೊಮ್ಯಾಟೊ, ಬೀಟ್‌ರೂಟ್ ಸೇರಿದಂತೆ ಇತರ ತರಕಾರಿ ಬೆಳೆಗಳನ್ನು ಬೆಳೆಯಲು ಆರಂಭಿಸಿ ಉತ್ತಮ ಇಳುವರಿ ಪಡೆದು ಯಶಸ್ಸು ಕಂಡರು. ಇದೀಗ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಸಲುವಾಗಿ ಹೈನುಗಾರಿಕೆಯತ್ತ ಮನಸ್ಸು ಮಾಡಿರುವ ಮೂಲಕ ಇತರರಿಗೆ ಮಾದರಿ ಎನಿಸಿದ್ದಾರೆ.

ಕೊಟ್ಟಿಗೆ ಗೊಬ್ಬರ ಬಳಕೆ:
ಜಮೀನಿನಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದ್ದು, ಈಗಾಗಲೇ ವಿವಿಧ ಬೆಳೆಗಳನ್ನು ಬೆಳೆದು ಕೃಷಿಯಲ್ಲಿ ಉತ್ತಮ ಅನುಭವ ಹೊಂದಿದ್ದಾರೆ. ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಪ್ರಸ್ತುತ ಒಂದು ಎಕರೆಯಲ್ಲಿ ಬದನೆ ಫಸಲಿದ್ದು ಫಲ ನೀಡುವ ಹಂತದಲ್ಲಿದೆ. ಇನ್ನುಳಿದ ಪ್ರದೇಶದಲ್ಲಿ ಜಾನುವಾರುಗಳಿಗೆ ಮೇವು ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ತರಕಾರಿ ಬೆಳೆಗಳನ್ನು ಬೆಳೆಯಲು ನಿರ್ಧರಿಸಿದ್ದಾರೆ. ಅವಿದ್ಯಾವಂತರಾದರೂ ಕೃಷಿಯಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ.

ಹೈನುಗಾರಿಕೆಯತ್ತ ಒಲವು:
ಈ ಹಿಂದೆ 5 ನಾಟಿ ಹಸುಗಳನ್ನು ಸಾಕಣೆ ಮಾಡುತ್ತಿದ್ದರು. ಆದರೀಗ ಹೈನುಗಾರಿಕೆ ಬಗ್ಗೆ ಹೆಚ್ಚು ಒಲವು ಹೊಂದುವ ಮೂಲಕ 50 ರಿಂದ 60 ಸಾವಿರ ರೂ. ದರದಲ್ಲಿ 10 ಇಲಾತಿ ಹಸುಗಳನ್ನು ಖರೀದಿಸಿ ಸಾಕಣೆ ಮಾಡುತ್ತಿದ್ದಾರೆ. ಇದಕ್ಕಾಗಿ ಜಮೀನಿನಲ್ಲೇ ಸುಮಾರು 7 ಲಕ್ಷ ರೂ. ವ್ಯಯಿಸಿ ಸುಸಜ್ಜಿತವಾದ ಶೆಡ್ ನಿರ್ಮಾಣ ಮಾಡಿದ್ದಾರೆ. ಕುಡಿಯುವ ನೀರಿಗಾಗಿ ಪ್ರತ್ಯೇಕ ತೊಟ್ಟಿ ನಿರ್ಮಿಸಲಾಗಿದೆ. ಜಾನುವಾರುಗಳಿಗೆ ಪೌಷ್ಟಿಕ ಮೇವನ್ನು ಪೂರೈಸುವುದರ ಜತೆಗೆ ಯಾವುದೇ ರೋಗರುಜಿನ ತಗುಲದಂತೆ ಪೋಷಣೆ ಮಾಡಲಾಗುತ್ತಿದ್ದು, ಇನ್ನಿಲ್ಲದ ಕಾಳಜಿ ವಹಿಸುತ್ತಿದ್ದಾರೆ. ಇದರಿಂದ ನಿತ್ಯ ಬೆಳಗ್ಗೆ ಹಾಗೂ ಸಂಜೆ ಅವಧಿಯಲ್ಲಿ 60 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಜಾನುವಾರುಗಳ ಸಂಖ್ಯೆಯನ್ನು ಹೆಚ್ಚಿಸಿ ಉತ್ತಮ ಆದಾಯದ ನಿರೀಕ್ಷೆ ಹೊಂದಿದ್ದಾರೆ.

ಪುತ್ರನ ಸಾಥ್:
ಹೈನುಗಾರಿಕೆಯಲ್ಲಿ ಅಭಿವೃದ್ಧಿ ಹೊಂದುವ ಮನಸ್ಸು ಮಾಡಿರುವ ಕುನ್ನಪ್ಪನಾಯ್ಡು ಅವರಿಗೆ ಪುತ್ರ ಅಜಯ್‌ಕುಮಾರ್ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವುದರ ಜತೆಗೆ ಜಾನುವಾರುಗಳ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮಗನು ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತಿರುವುದರಿಂದ ಹೈನುಗಾರಿಕೆ ಅಭಿವೃದ್ಧಿಗೆ ಅನುಕೂಲವಾಗಿದೆ ಎನ್ನುತ್ತಾರೆ ಕುನ್ನಪ್ಪನಾಯ್ಡು.
ಶಿಕ್ಷಣ ಪಡೆದು ಕೃಷಿಯಲ್ಲಿ ತೊಡಗಿಕೊಂಡು ಯಶಸ್ಸು ಗಳಿಸಿರುವವರು ತಾಲೂಕಿನಲ್ಲಿ ಇದ್ದಾರೆ. ಹಾಗೆಯೇ ಇವರಿಗೆ ಏನೂ ಕಡಿಮೆ ಇಲ್ಲ ಎಂಬಂತೆ ಅವಿದ್ಯಾವಂತರಾದ ಕುನ್ನಪ್ಪನಾಯ್ಡು ಅವರು ಕೃಷಿ ಜತೆಗೆ ಹೈನುಗಾರಿಕೆಯತ್ತ ಹೆಚ್ಚಿನ ಒಲವು ತೋರುವ ಮೂಲಕ ಇತರರಿಗೆ ಸ್ಫೂರ್ತಿದಾಯಕರಾಗಿದ್ದಾರೆ ಎಂದರೆ ತಪ್ಪಾಗಲಾರದು.

ನಮ್ಮದು ಕೃಷಿ ಕುಟುಂಬ. ಹಿಂದಿನಿಂದಲೂ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. 35 ವರ್ಷಗಳಿಂದ ಸಂಪೂರ್ಣ ಕೃಷಿಯಲ್ಲಿ ತೊಡಗಿದ್ದು, ಉತ್ತಮ ಅನುಭವ ನನಗಿದೆ. ಇದೀಗ ಹೈನುಗಾರಿಕೆಯತ್ತ ಒಲವು ಮೂಡಿದ್ದು, ಲಕ್ಷಾಂತರ ರೂ. ವ್ಯಯಿಸಿ 10 ಇಲಾತಿ ಹಸುಗಳನ್ನು ಸಾಕುತ್ತಿದ್ದೇನೆ. ದಿನಕ್ಕೆ 60 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದೇನೆ. ಕುನ್ನಪ್ಪನಾಯ್ಡು, ರೈತ ಚಿಕ್ಕಮಾಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net