ಹೊರಗುತ್ತಿಗೆ ನೌಕರರಿಗೆ 15 ತಿಂಗಳಿಂದ ವೇತನ ಇಲ್ಲ!

Published on

ಹನೂರು; ಪಟ್ಟಣ ಪಂಚಾಯಿತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 9 ನೌಕರರಿಗೆ ಕಳೆದ 15 ತಿಂಗಳಿನಿಂದ ಸಂಬಳವಾಗದ ಪರಿಣಾಮ ಇವರ ಜೀವನ ನಿರ್ವಹಣೆಯ ಮೇಲೆ ಆರ್ಥಿಕ ಹೊಡೆತ ಬಿದ್ದಿದ್ದು, ಸಾಲ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಪಪಂನಲ್ಲಿ ಮೈಸೂರಿನ ಪ್ರಜ್ವಲ್ ಎಂಟರ್‌ಪ್ರೈಸಸ್ ಏಜೆನ್ಸಿಯ ಮೂಲಕ ಕೆಂಪರಾಜು, ನಿಂಗರಾಜು, ಚಂದ್ರು, ಅರುಣ್, ಶ್ರೀನಿವಾಸ್, ರಾಕೇಶ್, ಶರತ್‌ಕುಮಾರ್, ಸುರೇಶ್ ಹಾಗೂ ಚೇತನ್ ಎಂಬುವರು ವಾಹನ ಚಾಲಕ, ಸಹಾಯಕ ಹಾಗೂ ಲೋಡರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈ ನೌಕರರ ವೇತನವನ್ನು ಪಪಂ ನಿಧಿಯಿಂದ ಪ್ರಥಮ ಆದ್ಯತೆ ಮೇರೆಗೆ ಪಾವತಿಸಬೇಕು. ಆದರೆ ಇಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಕಳೆದ 15 ತಿಂಗಳಿನಿಂದ ಸಂಬಳವಾಗಿಲ್ಲ. ಹೀಗಿದ್ದರೂ ನೌಕರರು ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದು, ಸಂಬಳ ಬಿಡುಗಡೆ ಮಾಡುವಂತೆ ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಮಾಡಿದರೂ ಈ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ ಎಂಬುದು ನೌಕರರು ಆರೋಪಿಸಿದ್ದಾರೆ.

ಸಾಲ ಮಾಡಿ ಜೀವನ:
ಇಲ್ಲಿನ 9 ನೌಕರರ ಪೈಕಿ 7 ಮಂದಿಗೆ ವಿವಾಹವಾಗಿದ್ದು, ಪಪಂನಿಂದ ಸಿಗುವ ಸಂಬಳವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಸಂಬಳವಾಗದ ಪರಿಣಾಮ ಸಾಲ ಮಾಡಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಇದೀಗ ಶಾಲೆಗಳು ಆರಂಭವಾಗಿರುವುದರಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ಸಹ ಸಾಲ ಮಾಡಬೇಕಿದೆ. ನೌಕರರ ಪರಿಸ್ಥಿತಿ ಹೀಗಿದ್ದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ನಿಜಕ್ಕೂ ವಿಪರ್ಯಾಸ.

ಸುತ್ತೋಲೆಗೂ ಬೆಲೆ ಇಲ್ಲ:
ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಪಾವತಿಯಾಗದೇ ಇರುವುದರಿಂದ ಇವರ ಕುಟುಂಬ ಆರ್ಥಿಕವಾಗಿ ಸಂಕಷ್ಟದಿಂದ ಬಳಲುತ್ತಿರುವುದರ ಬಗ್ಗೆ ಪೌರಾಡಳಿತ ನಿರ್ದೇಶನಾಲಯದ ಗಮನಕ್ಕೆ ಬಂದಿದ್ದು, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಕಡ್ಡಾಯವಾಗಿ ವೇತನ ಪಾವತಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ತಪ್ಪಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಆದರೆ ಪಪಂ ಮುಖ್ಯಾಧಿಕಾರಿ ಅವರು ವೇತನ ಪಾವತಿಸಲು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಗೂ ಬೆಲೆ ಇಲ್ಲದಂತಾಗಿದೆ. ಇದರಿಂದ ನೌಕರರ ಬದುಕು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ವೇತನ ಬಿಡುಗಡೆ ಮಾಡುವಂತೆ ಹೊರಗುತ್ತಿಗೆ ನೌಕರರು ಒತ್ತಾಯಿಸಿದ್ದಾರೆ.

ಕಳೆದ 15 ತಿಂಗಳಿನಿಂದ ಸಂಬಳವಾಗಿಲ್ಲ. ಇದರಿಂದ ಸಾಲ ಮಾಡಿ ಜೀವನ ನಡೆಸಲಾಗುತ್ತಿದ್ದು, ತುಂಬ ತೊಂದರೆ ಅನುಭವಿಸುತ್ತಿದ್ದೇನೆ. ಇತ್ತ ಇದೀಗ ಶಾಲೆ ಆರಂಭವಾಗಿರುವುದರಿಂದ ಮಗನನ್ನು ಶಾಲೆಗೆ ಸೇರಿಸಲು ಸಹ ಹಣವನ್ನು ಹೊಂದಿಸಬೇಕಿದೆ. ವೇತನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟವರಲ್ಲಿ ಹಲವು ಬಾರಿ ಮಾಡಿದರೂ ಈ ಬಗ್ಗೆ ಗಮನಹರಿಸುತ್ತಿಲ್ಲ. ಇದರಿಂದ ದಿಕ್ಕೇ ತೋಚದಂತಾಗಿದೆ.ಹೆಸರು ಹೇಳಲಿಚ್ಛಿಸದ ಪಪಂ ನೌಕರ. ಪಪಂನಲ್ಲಿ ಸಮರ್ಪಕವಾಗಿ ತೆರಿಗೆ ವಸೂಲಾತಿಯಾಗುತ್ತಿಲ್ಲ. ಇದರಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ನೀಡಲು ಸಮಸ್ಯೆಯಾಗಿದೆ. ಹಾಗಾಗಿ ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ವೇತನ ಪಾವತಿಗೆ ಗಮನಹರಿಸಲಾಗುವುದು.ಮಹೇಶ್‌ಕುಮಾರ್, ಮುಖ್ಯಾಧಿಕಾರಿ ಹನೂರು ಪಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net