58 ಕುಟುಂಬದಿಂದ ಮಾಹಿತಿ ಸಂಗ್ರಹ

Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಮೆಂದಾರೆ ಗಿರಿಜನರ ಕಾಲನಿಯನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಸಂಬಂಧ ಕೈಗೊಂಡಿದ್ದ ಸಮೀಕ್ಷಾ ಕಾರ್ಯದಲ್ಲಿ 58 ಕುಟುಂಬದಿಂದ ವಿವಿಧ ಅಂಶಗಳ ಮಾಹಿತಿ ಸಂಗ್ರಹಿಸಲಾಗಿದೆ.

ಮಾಹಿತಿ ಸಂಗ್ರಹಿಸಲು ಎಸಿ ಶಿವಮೂರ್ತಿ ನೇತೃತ್ವದಲ್ಲಿ 6 ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಮೀಕ್ಷಾ ಕಾರ್ಯವನ್ನು ಮಂಗಳವಾರ ಪೂರ್ಣಗೊಳಿಸಿತ್ತು. ಸಮೀಕ್ಷೆಯಲ್ಲಿ ಮನೆಯ ಮುಖ್ಯಸ್ಥ, ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಉದ್ಯೊಗ ಚೀಟಿ, ಜಾತಿ, ಆದಾಯ ಪ್ರಮಾಣಪತ್ರ, ಬ್ಯಾಂಕ್ ವಿವರ, ಕುಟುಂಬದ ಸದಸ್ಯರ ಸಂಖ್ಯೆ, ಮನೆ, ಶೌಚಗೃಹ, ಕುಡಿಯುವ ನೀರು, ವಿದ್ಯುತ್, ಕೃಷಿ ಭೂಮಿ ಹಾಗೂ ಗ್ರಾಮ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆಯಿಂದ ನೀಡಲಾಗುವ ಸೌಕರ್ಯ ಸೇರಿದಂತೆ 20 ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಲಾಗಿದೆ.

ಗ್ರಾಮದಲ್ಲಿರುವ 58 ಕುಟುಂಬಗಳ ಪೈಕಿ 57 ಕುಟುಂಬ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪೌಷ್ಟಿಕ ಆಹಾರ ಪದಾರ್ಥ ಪಡೆಯುತ್ತಿದೆ. 56 ಕುಟುಂಬ ಗ್ಯಾಸ್ ಸಂಪರ್ಕ ಹೊಂದಿದೆ. 15 ಎಕರೆಯಲ್ಲಿನ 7 ಜನರು ಜಮೀನಿನ ಆರ್‌ಟಿಸಿಯನ್ನು ಹೊಂದಿದ್ದು, 5 ಜನರಲ್ಲಿ ಸಾಗುವಳಿ ಚೀಟಿ ಇದೆ. 6 ಜನರಿಗೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಹೊಂದಿಲ್ಲ ಎಂದು ತಿಳಿದು ಬಂದಿದ್ದು, ಇತರ ಅಂಶಗಳು ಗೌಪ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net