

ಹನೂರು: ತಾಲೂಕಿನ ಮಲೆ ಮಹದೇಶ್ವರಬೆಟ್ಟದ ತಪ್ಪಲಿನ ಮೆಂದಾರೆ ಗ್ರಾಮದ ಗಿರಿಜನರು ಇಂಡಿಗನತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಕಳುಹಿಸುವುದಕ್ಕೆ ಹಿಂದೇಟು ಹಾಕಿದ್ದು, ಮಹದೇಶ್ವರಬೆಟ್ಟದ ಬುಡಕಟ್ಟು ಆಶ್ರಮ ಶಾಲೆಗೆ ಸೇರಿಸಲು ನಿರ್ಧರಿಸಿದ್ದಾರೆ.
ಏ.26ರಂದು ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಘಟನೆ ಹಿನ್ನೆಲೆ ಮೆಂದಾರೆ ಗ್ರಾಮದ ಜನರು ಹಲ್ಲೆಗೊಳಗಾಗಿ ಗಾಯಗೊಂಡಿದ್ದರು. ಇದರಿಂದ ಭಯಭೀತರಾದ ಗ್ರಾಮಸ್ಥರು ಗ್ರಾಮದಲ್ಲಿನ 13 ಮಕ್ಕಳನ್ನು ಇಂಡಿಗನತ್ತ ಶಾಲೆಗೆ ಕಳುಹಿಸುವುದಿಲ್ಲ ಎಂದು ಒಕ್ಕೊರಲಿನ ತೀರ್ಮಾನ ವ್ಯಕ್ತಪಡಿಸಿ, ಮ.ಬೆಟ್ಟದ ಬುಡಕಟ್ಟು ಆಶ್ರಮ ಶಾಲೆಗೆ ಮಕ್ಕಳನ್ನು ಕಳುಹಿಸುವುದಾಗಿ ನಿರ್ಧರಿಸಿದ್ದರು. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿದಿತ್ತು. ಹಾಗಾಗಿ ಶಾಲಾ ಆರಂಭದ ಹಿನ್ನೆಲೆಯಲ್ಲಿ ಬುಧವಾರ ಇಂಡಿಗನತ್ತ ಶಾಲೆಯ ಶಿಕ್ಷಕ ರಾಘವೇಂದ್ರ ಅವರು ಗ್ರಾಮಕ್ಕೆ ತೆರಳಿ ಪಾಲಕರನ್ನು ಭೇಟಿಯಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು. ನಮ್ಮ ಮಕ್ಕಳನ್ನು ಇಂಡಿಗನತ್ತ ಶಾಲೆಗೆ ಕಳುಹಿಸುವುದಿಲ್ಲ, ನಾವು ಬುಡಕಟ್ಟು ಆಶ್ರಮ ಶಾಲೆಗೆ ದಾಖಲಿಸುವುದಾಗಿ ಪಾಲಕರು ತಿಳಿಸಿದರು.
ಹಾಜರಾದ 36 ಮಕ್ಕಳು: ಘಟನೆಯ ಬಳಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದ್ದು, ಇಂಡಿಗನತ್ತದ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಆಗಮಿಸುತ್ತಿದ್ದರು. ಆದರೆ ಮೆಂದಾರೆ ಗ್ರಾಮದ ಮಕ್ಕಳು ಆಗಮಿಸುತ್ತಿರಲಿಲ್ಲ. ಬುಧವಾರ ಶಾಲೆ ಆರಂಭದ ಹಿನ್ನೆಲೆ ಇಂಡಿಗನತ್ತ ಗ್ರಾಮದ 36 ಮಕ್ಕಳು ಶಾಲೆಗೆ ಆಗಮಿಸಿದ್ದು, ಬಿಸಿಯೂಟವನ್ನು ಸವಿದರು.
ಶಾಲೆ ಆರಂಭದ ಹಿನ್ನೆಲೆ ಮೆಂದಾರೆ ಗ್ರಾಮಕ್ಕೆ ಶಿಕ್ಷಕರನ್ನು ಕಳುಹಿಸಲಾಗಿತ್ತು. ಆದರೆ ಪಾಲಕರು ಮಕ್ಕಳನ್ನು ಇಂಡಿಗನತ್ತ ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದು, ಮ.ಬೆಟ್ಟದ ಬುಡಕಟ್ಟು ಅಶ್ರಮ ಶಾಲೆಗೆ ಸೇರಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಸಿಆರ್‌ಪಿ ಹಾಗೂ ಶಿಕ್ಷಕರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸೋಮವಾರ ಬುಡಕಟ್ಟು ಆಶ್ರಮ ಶಾಲೆಗೆ ಮಕ್ಕಳನ್ನು ದಾಖಲು ಮಾಡಲು ಅಗತ್ಯ ಕ್ರಮವಹಿಸಲಾಗಿದೆ.ಮಹೇಶ್, ಬಿಇಒ, ಹನೂರು