ಪಟ್ಟಣ ಪಂಚಾತಿಯಿಂದ ನೀರು ಪೂರೈಕೆ ಸ್ಥಗಿತ

IMG-20240526-WA0198
Published on

ಹನೂರು; ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ್‌ಗಳಿಗೆ 4 ದಿನದಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ಆರೋಪಿಸಿದ್ದಾರೆ.

3 ದಿನಗಳ ಹಿಂದೆ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆಯಾಗುವ ಸಿದ್ದಯ್ಯನಪುರ ಪಂಪ್‌ಹೌಸ್‌ನಲ್ಲಿ ಮೋಟಾರ್ ಹದಗೆಟ್ಟಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಇದುವರೆಗೂ ಮೋಟಾರ್ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಪಟ್ಟಣಕ್ಕೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ ಎಂದು ಭಾನುವಾರ ವಿಜಯವಾಣಿಗೆ ತಿಳಿಸಿದರು.

ಕಳೆದ ತಿಂಗಳು ಮೋಟಾರ್ ದುರಸ್ತಿಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಒಂದು ಲಕ್ಷ ರೂ. ಖರ್ಚು ಮಾಡಿದ ಮೋಟಾರ್ ಒಂದು ತಿಂಗಳು ಬರುವುದಾದರೆ ಆ ಮೋಟಾರ್‌ನ್ನು ಏಕೆ ದುರಸ್ತಿ ಪಡಿಸಬೇಕು? ಇದರ ಬದಲು ಹೊಸ ಮೋಟಾರ್ ಖರೀದಿಸಬಹುದಲ್ಲವೆ? 15 ದಿನಗಳ ಹಿಂದೆ ಜಿಲ್ಲಾಧಿಕಾರಿ ಅವರು ಕುಡಿಯುವ ನೀರಿನ ಸಂಬಂಧ ಸಭೆ ನಡೆಸಿದಾಗ ಮುಖ್ಯಾಧಿಕಾರಿ ಅವರು ಸಿದ್ದಯ್ಯನಪುರ ಪಂಪ್‌ಹೌಸ್‌ನಲ್ಲಿ ಒಂದು ಮೋಟಾರ್ ದುರಸ್ತಿಯಾಗಿದ್ದು, ಇನ್ನೊಂದು ಮೋಟಾರ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ. ಸದ್ಯ ಮೋಟಾರ್ ಒಂದು ಮಾತ್ರ ಕಾಣಿಸುತ್ತಿದ್ದು, ಇನ್ನೊಂದು ಎಲ್ಲಿ ಹೋಗಿದೆ ಎಂಬುದೇ ತಿಳಿಯುತ್ತಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಅವರು ಸಿದ್ದಯ್ಯನಪುರ ಪಂಪ್‌ಹೌಸ್‌ಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ವರ್ಷಗಳೇ ಕಳೆದಿವೆೆ. ಮುಖ್ಯಾಧಿಕಾರಿ ಪರಶಿವಯ್ಯ ಅವರು 90 ಸಾವಿರ ರೂ. ಖರ್ಚು ಮಾಡಿ ದುರಸ್ತಿಪಡಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಒಂದು ದಿನವೂ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯ ನಿರ್ವಹಿಸಿಲ್ಲ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net