

ಹನೂರು: ಭೌಗೋಳಿಕವಾಗಿ ವಿಭಿನ್ನವಾಗಿರುವ ಹನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಶಾಸಕ ಎಂ.ಆರ್. ಮಂಜುನಾಥ್ ಸೋಮವಾರ ವಿಧಾನಸಭೆಯ ಅಧಿವೇಶನದ ವೇಳೆ ಸಭಾಧ್ಯಕ್ಷ ಯು.ಟಿ ಖಾದರ್ ಅವರಲ್ಲಿ ಮನವಿ ಮಾಡಿದರು.
ಹನೂರು ಕ್ಷೇತ್ರವು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, 6.5 ಲಕ್ಷ ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ 280 ದಾಖಲೆ ಗ್ರಾಮಗಳು ಹಾಗೂ 88 ಗಿರಿಜನರ ಹಾಡಿಗಳಿವೆ. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ಬಹುತೇಕ ಕಡೆಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಸಮರ್ಪಕ ನೀರಾವರಿ, ವಿದ್ಯುತ್ ಪೂರೈಕೆಯ ಕೊರತೆ ಇದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮಧ್ಯರಂಗನಾಥಸ್ವಾಮಿ, ಶಿಂಷಾದ ಮಾರಮ್ಮ, ಸಿದ್ದಾಪ್ಪಾಜಿ ಸೇರಿದಂತೆ ಇನ್ನಿತರೆ ಕೆಲವು ಪ್ರಸಿದ್ಧ ದೇಗುಲಗಳಿದ್ದು, ಇವುಗಳ ಅಭಿವೃದ್ಧಿಯಾಗಬೇಕಿದೆ ಈ ಸಲುವಾಗಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.
ಕ್ಷೇತ್ರದಲ್ಲಿ 1.72 ಲಕ್ಷ ಹೆ. ಅರಣ್ಯ ಪ್ರದೇಶವಿದ್ದು, ಕಾಡು ಪ್ರಾಣಿಗಳು ರೈತರಿಗೆ ತೊಂದರೆ ನೀಡುತ್ತಿವೆ. ಕಳೆದ 2 ದಿನದ ಹಿಂದೆ ಕಗ್ಗಲಿಗುಂದಿ ಗ್ರಾಮದ ಬಾಲಕಿಯೊಬ್ಬಳು ಚಿರತೆ ದಾಳಿಗೆ ಬಲಿಯಾಗಿದ್ದಾಳೆ. ಈ ಬಗ್ಗೆ ಗಮನಹರಿಸಿ ಇಂತಹ ಘಟನೆಗಳು ಮರುಕಳುಹಿಸದಂತೆ ಅಗತ್ಯ ಕ್ರಮವಹಿಸಬೇಕು. ಜತೆಗೆ ಆನೆ ಕಂದಕಗಳನ್ನು ನಿರ್ಮಿಸಬೇಕು ಎಂದರು.