

ಹನೂರು: ಪಟ್ಟಣದ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಗಿರಿಜನ ಅಭಿವೃದ್ಧಿ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮೆಂದಾರೆ ಗ್ರಾಮಸ್ಥರು ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಘಟನೆಯ ಅಳಲು ತೋಡಿಕೊಂಡರು.
ಸಭೆಯಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಮಾದೇಗೌಡ, ರಾಜ್ಯ ಮೂಲ ಆದಿವಾಸಿ ಬುಡಕಟ್ಟು ಜನರ ವೇದಿಕೆ ಕಾರ್ಯದರ್ಶಿ ವಿ.ಮುತ್ತಯ್ಯ, ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡಸಿದ್ದೇಗೌಡ, ಕಾರ್ಯದರ್ಶಿ ರಂಗೇಗೌಡ, ಮ.ಬೆಟ್ಟ ಕ್ಷೇತ್ರ ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷದ ಗಿರಿಯಾ, ಗುಂಡಾಲ್‌ನ ಕೇತೇಗೌಡ, ಪೊನ್ನಾಚಿಯ ಭದ್ರಪ್ಪ, ಹುತ್ತೂರಿನ ನಾಗಣ್ಣ, ಪಿ.ಜಿ. ಪಾಳ್ಯದ ಪೇರಿಸ್ವಾಮಿ, ನಕ್ಕುಂದಿಯ ರಂಗೇಗೌಡ ಸೇರಿದಂತೆ 50ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರು.
ಮೆಂದಾರೆ ಗಿರಿಜನ ಗ್ರಾಮದ ಹಿರಿಯ ಮುಖಂಡರಾದ ಶಿವಕುಮಾರ್, ಪಡಗಲ, ಭೈರ ಹಾಗೂ ವೀರಣ್ಣ ಮಾತನಾಡಿ, ಗಿರಿಜನರಿಗೆ ಸರ್ಕಾರ ಹಲವು ಸವಲತ್ತು ನೀಡುತ್ತಿದೆ. ಮತ ಚಲಾಯಿಸುವುದು ನಮ್ಮ ಹಕ್ಕು ಹಾಗೂ ಕರ್ತವ್ಯವೂ ಹೌದು. ಹಾಗಾಗಿ ಏ.26 ರಂದು ಮತ ಚಲಾಯಿಸಲು ಇಂಡಿಗನತ್ತ ಗ್ರಾಮಕ್ಕೆ ತೆರಳಿದ್ದ ವೇಳೆ ಗ್ರಾಮಸ್ಥರು ನಮ್ಮ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಇದರಿಂದ ಇಂದಿಗೂ ನೋವನ್ನು ಅನುಭವಿಸುವಂತಾಗಿದ್ದು, ಕೂಲಿ ಮಾಡಿಕೊಂಡು ಜೀವನ ನಡೆಸಲು ಸಾಧ್ಯವಿಲ್ಲವಾಗಿದೆ. ಘಟನೆಯಿಂದ ನಮ್ಮಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಗ್ರಾಮ ತೊರೆಯಲು ನಿರ್ಧರಿಸಿದ್ದು, ಇತ್ತೀಚೆಗೆ ಜಿಲ್ಲಾಧಿಕಾರಿ ಅವರು ಗ್ರಾಮಕ್ಕೆ ಆಗಮಿಸಿದ್ದ ವೇಳೆ ಗ್ರಾಮವನ್ನು ಪಾಲಾರ್‌ಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದ್ದೇವೆ. ಅವರೂ ಅಗತ್ಯ ಭರವಸೆ ನೀಡಿದ್ದಾರೆ. ಆದ್ದರಿಂದ ಈ ಬಗ್ಗೆ ಸಂಘದ ಪದಾಧಿಕಾರಿಗಳು ಮುತುವರ್ಜಿ ವಹಿಸಿ ನಮಗೆ ಅನುಕೂಲ ಕಲ್ಪಿಸಬೇಕು. ಜತೆಗೆ ಹಲ್ಲೆಗೊಳಗಾದ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿ ಬಳಿಗೆ ನಿಯೋಗ:
ಈ ವೇಳೆ ಜಿಲ್ಲಾ ಕಾರ್ಯದರ್ಶಿ ಡಾ.ಮಾದೇಗೌಡ ಮಾತನಾಡಿ, ಮೆಂದಾರೆ ಗ್ರಾಮಕ್ಕೆ ಪುನರ್ವಸತಿ ಕಲ್ಪಿಸುವ ಸಂಬಂಧ ಮೇ 27ರಿಂದ ಎಸಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿಯ ತಂಡ ಗ್ರಾಮಕ್ಕೆ ಆಗಮಿಸಿ ಸಮೀಕ್ಷೆ ನಡೆಸಲಿದೆ. ಆದ್ದರಿಂದ ಪ್ರತಿಯೊಬ್ಬರೂ ಅಗತ್ಯ ದಾಖಲೆ ನೀಡುವ ಮೂಲಕ ಸಮರ್ಪಕ ಮಾಹಿತಿ ಒದಗಿಸಬೇಕು. ಪುನರ್ವಸತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಅವರ ಬಳಿ ನಿಯೋಗ ತೆರಳಿ ಮನವಿ ಮಾಡಲಾಗುವುದು. ಜತೆಗೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಹಾಗೂ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಿ ಅನುಕೂಲ ಕಲ್ಪಿಸಲಾಗುವಂತೆ ಒತ್ತಾಯಿಸಲಾಗುವುದು. ಆದ್ದರಿಂದ ಯಾವುದೇ ಕಾರಣಕ್ಕೂ ಎದೆಗುಂದಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು. ಇದೇ ವೇಳೆ ಘಟನೆಯಿಂದ ನೊಂದ ಆದಿವಾಸಿ ಕುಟುಂಬಗಳಿಗೆ ಜಿಲ್ಲಾಡಳಿತ ಸಕಾರಾತ್ಮಕಾಗಿ ಸ್ಪಂದಿಸಿರುವ ಹಿನ್ನೆಲೆ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಒತ್ತಾಯ:
ಮೆಂದಾರೆ ಗ್ರಾಮ ಪುನರ್ವಸತಿ ಕಲ್ಪಿಸುವ ಸಂಬಂಧ ಸೋಲಿಗ ಅಭಿವೃದ್ಧಿ ಸಂಘದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತೀರ್ಮಾನಿಸಲಾಯಿತು. ಅಲ್ಲದೆ ಸಮೀಕ್ಷೆ ಸಮಿತಿಗೆ ಸೋಲಿಗ ಮುಖಂಡರನ್ನು ನೇಮಿಸಬೇಕು. ಪುನರ್ವಸತಿ ಯೋಜನೆಯ ವರದಿಯನ್ನು ವಿವಿಧ ಇಲಾಖೆಯ ಸಮನ್ವತೆಯಿಂದ ಅನುಷ್ಠಾನಕ್ಕೆ ಯೋಗ್ಯ ರೀತಿಯಲ್ಲಿ ಹಾಗೂ ಸೋಲಿಗರ ಇಚ್ಛೆಗೆ ಅನುಗುಣವಾಗಿ ಕಾರ್ಯರೂಪಗೊಳಿಸಬೇಕು. ಘಟನೆಯಿಂದ ನೊಂದ ಕುಟುಂಬಗಳಿಗೆ ಶೀಘ್ರ ಪರಿಹಾರ ದೊರಕಿಸಿ ಕೊಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.