

ಹನೂರು: ತಾಲೂಕಿನ ಅಜ್ಜೀಪುರ ಗ್ರಾಮದ ಜಮೀನೊಂದಕ್ಕೆ ಶುಕ್ರವಾರ ರಾತ್ರಿ ಆನೆ ದಾಳಿ ನಡೆಸಿ, ಮುಸುಕಿನ ಜೋಳದ ಫಸಲು ನಾಶ ಪಡಿಸಿರುವುದರ ಜತೆಗೆ ಸೋಲಾರ್ ತಂತಿಯನ್ನು ಹಾನಿಗೊಳಿಸಿದೆ.
ಗ್ರಾಮದ ಪತ್ರಕರ್ತ ಸುರೇಶ್ ಎಂಬುವರು 3 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದು, ತೆನೆ ಕಟ್ಟುವ ಹಂತಕ್ಕೆ ಬಂದಿತ್ತು. ಆದರೆ ರಾತ್ರಿ ಸೋಲಾರ್ ತಂತಿ ಹಾಗೂ ಕಲ್ಲು ಕಂಬವನ್ನು ನಾಶಗೊಳಿಸಿ ಜಮೀನಿಗೆ ಲಗ್ಗೆ ಇಟ್ಟ ಆನೆ, ಜೋಳವನ್ನು ತುಳಿದು ನಾಶಪಡಿಸಿದೆ. ಇದರಿಂದ ಲಕ್ಷಾಂತರ ರೂ ನಷ್ಟವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಸುರೇಶ್ ಅವರು ಒತ್ತಾಯಿಸಿದರು. ಈ ಹಿಂದೆ ಗ್ರಾಮದ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಯನ್ನು ಅಳವಡಿಸಿದ್ದರಿಂದ ಆನೆಗಳು ಜಮೀನಿಗೆ ಲಗ್ಗೆ ಇಡುತ್ತಿರಲಿಲ್ಲ. ಆದರೆ ಒಂದು ತಿಂಗಳ ಹಿಂದೆ ರೈಲ್ವೆ ಕಂಬಿಗಳು ಮುರಿದು ಬಿದ್ದಿವೆ. ಇದರಿಂದ ಆನೆ ಜಮೀನುಗಳಿಗೆ ಲಗ್ಗೆ ಇಡಲು ಶುರುಮಾಡಿವೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರೈಲ್ವೆ ಕಂಬಿಯನ್ನು ರಿಪೇರಿ ಪಡಿಸುವಂತೆ ಒತ್ತಾಯಿಸಿದ್ದಾರೆ.