

ಹನೂರು: ಇಂಡಿಗನತ್ತ ಮತಗಟ್ಟೆಗೆ ಮತದಾನ ಮಾಡಲು ಹೋದಾಗ ಬಿದ್ದ ಕಲ್ಲೇಟಿನಿಂದ ಗಾಯಗಳಾಗಿವೆ. ಇನ್ನೂ ನೋವು ಉಪಶಮನವಾಗಿಲ್ಲ ಎಂದು ಮಹದೇಶ್ವರ ಬೆಟ್ಟದ ಮೆಂದಾರೆ ಗ್ರಾಮಸ್ಥ ಪಡಗಲ ಹೇಳಿದರು.
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಪ್ರಕರಣ ನಡೆದಿದ್ದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಗಾಯಗಳಿಂದಾಗಿ ಕೂಲಿಗೂ ಹೋಗಲು ಆಗುತ್ತಿಲ್ಲ. ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಇದೇ ರೀತಿ ಗ್ರಾಮದ ಹಲವರು ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮ ಕಷ್ಟ ಕೇಳುವವರೂ ಯಾರೂ ಇಲ್ಲ. ದಿನ ದುಡಿದರಷ್ಟೇ ನಮ್ಮ ಜೀವನ ನಿರ್ವಹಣೆಯಾಗುವುದು. ಪಡಿತರ ಧಾನ್ಯದಿಂದ ನಮ್ಮ ಹೊಟ್ಟೆ ತುಂಬುತ್ತಿದೆ. ನಮ್ಮ ಕಷ್ಟಕ್ಕೆ ಸ್ಪಂದಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು.