

ಹನೂರು: ಮತಗಟ್ಟೆ ಧ್ವಂಸ ಪ್ರಕರಣದ ಕೇಂದ್ರ ಬಿಂದುವಾಗಿರುವ ಇಂಡಿಗನತ್ತ, ಮೆಂದಾರೆ ಗ್ರಾಮಗಳ ಜನರಲ್ಲಿನ ಆತಂಕ ಇನ್ನೂ ದೂರವಾಗಿಲ್ಲ.
ಹನೂರು ತಾಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮಲ್ಲಿ ಮೂಲಸೌಕರ್ಯಕ್ಕೆ ಒತ್ತಾಯಿಸಿ ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಆದರೆ, ಪಕ್ಕದ ಮೆಂದಾರೆ ಗ್ರಾಮಸ್ಥರು ಮತ ಹಾಕಲು ಬಂದಾಗ ಗಲಭೆ ನಡೆಯಿತು. ಈ ಪ್ರಕರಣದಲ್ಲಿ ಇಂಡಿಗನತ್ತ ಗ್ರಾಮದ 46 ಜನರನ್ನು ಬಂಧಿಸಿ ಈಗ ಬಿಡುಗಡೆ ಮಾಡಲಾಗಿದೆ.
ಕಲ್ಲೇಟು ತಿಂದು ಗಾಯಗೊಂಡಿರುವ ಮೆಂದಾರೆ ಜನರು ಗುಣಮುಖರಾಗುತ್ತಿದ್ದಾರೆ. ಈ ಸ್ಥಿತಿಯಲ್ಲಿರುವ ಎರಡೂ ಗ್ರಾಮಗಳಲ್ಲಿ ನೀರವ ಮೌನ ಆವರಿಸಿದೆ. ನಾಳೆ ಏನಾಗುವುದೋ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಹಲವರು ಮನೆಯಿಂದ ಹೊರಬರಲು ಇಷ್ಟ ಪಡುತ್ತಿಲ್ಲ.ಇಷ್ಟು ದಿನ ಮೂಲಸೌಕರ್ಯಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಅನುಕೂಲ ಕಲ್ಪಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದವರು ಈಗ ಅವರಿಷ್ಟ ಬಂದಾಗ ಸೌಲಭ್ಯ ಕೊಡಲಿ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಲಿ ಎನ್ನುತ್ತಿದ್ದಾರೆ. ಮೆಂದಾರೆಯಲ್ಲಿ ಇರಲು ಇಷ್ಟ ಪಡದ ಜನರು ಪುನರ್ವಸತಿ ಕಲ್ಪಿಸಿಲು ಸ್ಥಳಾಂತರ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.