

ಹನೂರು: ತಾಲೂಕಿನ ಪೊನ್ನಾಚಿ ಗ್ರಾಮದಿಂದ ಕಲ್ಲು ಕ್ವಾರಿ ಕೆಲಸಕ್ಕೆ ತಮಿಳುನಾಡಿಗೆ ತೆರಳಿದ್ದ ಸೋಲಿಗ ಸಮುದಾಯಕ್ಕೆ ಸೇರಿದ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಗ್ರಾಮದ ಸೋಲಿಗ ಸಮುದಾಯದ ಮುನಿಯಪ್ಪ (40) ಮೃತರು. ಗುಂಡ ಹಾಗೂ ನಾಗ ಎಂಬುವರು ಗಾಯಗೊಂಡವರು. ವಾರದ ಹಿಂದೆ ಗ್ರಾಮದಿಂದ 30ಕ್ಕೂ ಹೆಚ್ಚು ಜನರು ತಮಿಳುನಾಡಿನ ಬರಗೂರು ಬೆಚ್ಚಲಟ್ಟಿ ಸಮೀಪದಲ್ಲಿ ನಡೆಯುತ್ತಿರುವ ಕರಿಕಲ್ಲು ಕ್ವಾರಿ ಕೆಲಸಕ್ಕೆ ಹೋಗಿದ್ದರು. ಬುಧವಾರ ಬೆಳಗ್ಗೆ ತಿಂಡಿ ತಿನ್ನುತ್ತಿದ್ದ ವೇಳೆ ಟಿಪ್ಪರ್‌ನಿಂದ ಬಂಡೆ ಉರುಳಿ ಬಿದ್ದು ಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟರೆ, ಗುಂಡ ಮತ್ತು ನಾಗ ಗಾಯಗೊಂಡರು.
ಮೃತದೇಹವನ್ನು ಗುರುವಾರ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ಮಾಡಲಾಯಿತು. ಗಾಯಗೊಂಡ ಇಬ್ಬರು ತಮಿಳುನಾಡಿನ ಹಂದಿಯೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಮಾಹಿತಿ ತಿಳಿದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮಠದ್ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು.