ಜಾನುವಾರುಗಳಿಗೆ ಮೇವು ಪೂರೈಕೆ

12 HANUR 1
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಗ್ರಾಮದಲ್ಲಿ ಜಾನುವಾರುಗಳಿಗೆ ತಲೆದೋರಿದ್ದ ಮೇವಿನ ಸಮಸ್ಯೆ ಕುರಿತ ಗ್ರಾಮಸ್ಥರ ಮನವಿಗೆ ಶನಿವಾರ ಜಿಲ್ಲಾಡಳಿತ ಸ್ಪಂದಿಸಿದೆ.

ಏ.26ರಂದು ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣದ ಹಿನ್ನೆಲೆ 45 ಜನರನ್ನು ಬಂಧಿಸಿದ್ದು, ಬಂಧನದ ಭೀತಿಯಿಂದ ಬಹುತೇಕ ಜನರು ಊರನ್ನೇ ತೊರೆದಿದ್ದರು. ಪರಿಣಾಮ ಜಾನುವಾರುಗಳು ಆರೈಕೆ ಇಲ್ಲದೆ ಸೊರಗಿದ್ದವು. ಅಲ್ಲದೆ ಮೇವಿನ ಸಮಸ್ಯೆ ತಲೆದೋರಿತ್ತು. ಇದರಿಂದ ಪುಟ್ಟತಂಬಡಿ ಹಾಗೂ ಮುರುಗೇಶ್ ತಂಬಡಿ ಅವರ 2 ಎಮ್ಮೆ ಹಾಗೂ 1 ಹಸು ಮೃತಪಟ್ಟಿತ್ತು. ಈ ವೇಳೆ ರೈತ ಸಂಘಟನೆ ಹಾಗೂ ಸ್ಥಳೀಯ ಮುಖಂಡರು ಜಾನುವಾರುಗಳಿಗೆ ಮೇವು ಪೂರೈಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು. ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಸೂಚನೆ ಮೇರೆಗೆ ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು ಗ್ರಾಮಕ್ಕೆ ಮೇವು ಒದಗಿಸಿದರು. ಶನಿವಾರ ಪಿಡಿಒ ಕಿರಣ್‌ಕುಮಾರ್ ಹಾಗೂ ಸಿಬ್ಬಂದಿ ತಂಡ ಗ್ರಾಮದ 64 ರೈತರಿಗೆ 2 ಟನ್ ವಿತರಿಸಿದೆ. ಇದರಿಂದ ಹೈನುಗಾರರು ನಿಟ್ಟುಸಿರು ಬಿಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net