ಇಂಡಿಗನತ್ತ , ಮೆಂದಾರೆ ಗ್ರಾಮಗಳಿಗೆ ಡಿಸಿ ಭೇಟಿ

13 HANUR 2A
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮಕ್ಕೆ ಸೋಮವಾರ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ಅಧಿಕಾರಿಗಳೊಂದಿಗೆ ತೆರಳಿ ಅನಾರೋಗ್ಯಕ್ಕೆ ತುತ್ತಾದವರ ಆರೋಗ್ಯ ವಿಚಾರಿಸಿ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿ ಧೈರ್ಯ ಹೇಳಿದರು.

ಈ ವೇಳೆ ಗ್ರಾಮಸ್ಥರು ಮಾತನಾಡಿ, ಘಟನೆಯಿಂದ ಜನರು ಭಯಭೀತರಾಗಿ ಕೆಲವರು ಊರನ್ನೇ ತೊರೆದಿದ್ದಾರೆ. ಇದರಿಂದ ಪಾಲಕರಿಲ್ಲದೇ ಮಕ್ಕಳು ಹಾಗೂ ವಯೋವೃದ್ಧರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ನೆಮ್ಮದಿಯ ವಾತವರಣ ಇಲ್ಲದಂತಾಗಿದೆ. ಆದ್ದರಿಂದ ಊರನ್ನು ತೊರೆದಿರುವವರನ್ನು ಕರೆ ತರುವಂತೆ ಮನವಿ ಮಾಡಿದರು.

ಇದಕ್ಕೆ ಜಿಲ್ಲಾಧಿಕಾರಿ ಅವರು ಪ್ರತಿಕ್ರಿಯಿಸಿ, ಘಟನೆಯಲ್ಲಿ ಭಾಗಿಯಾಗಿಲ್ಲದವರನ್ನು ಯಾವುದೇ ಕಾರಣಕ್ಕೂ ಬಂಧಿಸುವುದಿಲ್ಲ. ಇದರಲ್ಲಿ ಭಯಪಡುವ ಅಗತ್ಯವಿಲ್ಲ. ಹಾಗಾಗಿ ಅವರನ್ನು ಮನವೊಲಿಸಿ ಗ್ರಾಮಕ್ಕೆ ಕರೆತರುವಂತೆ ತಿಳಿಸಿದರು.
ಬಳಿಕ ಮನೆಮನೆಗೆ ತೆರಳಿದ ಜಿಲ್ಲಾಧಿಕಾರಿ ಅವರು ಜನರಿಂದ ವಸ್ತು ಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಅಗತ್ಯ ಭರವಸೆ ನೀಡಿದರು. ಈ ವೇಳೆ ಅನಾರೋಗ್ಯಕ್ಕೆ

ಒಳಗಾಗಿದ್ದವರಿಗೆ ತಪಾಸಣೆ ನಡೆಸಲಾಯಿತು. ಜತೆಗೆ ಜಂತುಹುಳು ನಿವಾರಣೆಗೆ ಮಕ್ಕಳಿಗೆ ಮಾತ್ರೆಯನ್ನು ವಿತರಿಸಲಾಯಿತು. ಗ್ರಾಮದಲ್ಲಿ 15ದಿನಕ್ಕೊಮ್ಮೆ ಶಿಬಿರವನ್ನು ಆಯೋಜಿಸಿ ಜನರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ವೈದ್ಯಾಧಿಕಾರಿಗೆ ಸೂಚಿಸಿದರು. ಇದೇ ವೇಳೆ ಎಸ್ಪಿ ಪದ್ಮಿನಿ ಸಾಹು ಮಾತನಾಡಿ, ಪ್ರಕರಣದಲ್ಲಿ ಭಾಗಿಯಾಗಿರುವ 45 ಜನರನ್ನು ಬಂಧಿಸಲಾಗಿದೆ. ಇನ್ನು 6 ಜನರು ಮಾತ್ರ ಬಾಕಿ ಇದ್ದಾರೆ. ಹಾಗಾಗಿ ತಲೆ ಮರೆಸಿಕೊಂಡಿರುವವರನ್ನು ಮನವೊಲಿಸಿ ಪೊಲೀಸರಿಗೆ ಒಪ್ಪಿಸಬೇಕು. ಇನ್ನುಳಿದವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.
ಪಡಿತರ ವಿತರಣೆ: ಭಯದಿಂದ ಜನರು ಊರನ್ನೇ ತೊರೆದಿದ್ದ ಪರಿಣಾಮ ಇಲ್ಲಿನ ಜನರು ಹಾಗೂ ಮಕ್ಕಳು ಊಟಕ್ಕಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಬೇಡಗಂಪಣ ಅರ್ಚಕ ಕೆ.ವಿ. ಮಾದೇಶ್ ನೇತೃತ್ವದ ತಂಡ ಒಂದೆಡೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಈ ಬಗ್ಗೆ ತಿಳಿದ ಜಿಲ್ಲಾಧಿಕಾರಿ ಅವರು ಪಡಿತರ ಹಾಗೂ ಅಡುಗೆಗೆ ಅಗತ್ಯವಾದ ಪದಾರ್ಥಗಳನ್ನು ವಿತರಿಸಿದರು.

ಸ್ಥಳಾಂತರಿಸುವಂತೆ ಅಳಲು: ಘಟನೆಯಿಂದ ಹಲ್ಲೆಗೊಳಗಾಗಿ ಗಾಯಗೊಂಡು ಭಯಭೀತಿಯಲ್ಲಿರುವ ಮೆಂದಾರೆ ಗ್ರಾಮಕ್ಕೂ ಜಿಲ್ಲಾಧಿಕಾರಿ ತಂಡ ಭೇಟಿ ನೀಡಿತು. ಈ ವೇಳೆ ಗ್ರಾಮಸ್ಥರನ್ನು ಒಟ್ಟಿಗೆ ಸೇರಿಸಿ ಸಭೆ ನಡೆಸಿದರು. ಈ ವೇಳೆ ಗಿರಿಜನರು ಮಾತನಾಡಿ, ಜಮೀನಿಲ್ಲದ ನಾವು ಇತರೆ ಜಮೀನುಗಳಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ಆದರೆ ಘಟನೆಯಿಂದಾಗಿ ಕೂಲಿ ಇಲ್ಲದಂತಾಗಿದೆ. ಜೀವನ ಕಷ್ಟಕರವಾಗಿದೆ. ಇತ್ತ ಜೀವಭಯ ನಮ್ಮನ್ನು ಕಾಡುತ್ತಿದೆ. ಆದ್ದರಿಂದ ನಮಗೆ ರಕ್ಷಣೆ ಒದಗಿಸಬೇಕು. ಇಲ್ಲವೇ ಗ್ರಾಮವನ್ನೇ ಸ್ಥಳಾಂತರ ಮಾಡುವಂತೆ ಒತ್ತಾಯಿಸಿರು.ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ನಿಮ್ಮ ಜತೆ ನಾವಿದ್ದೇವೆ. ಹಾಗಾಗಿ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಎಂದಿನಂತೆ ನೆಮ್ಮದಿಯಿಂದ ಜೀವನ ನಡೆಸಿರಿ. ಸರ್ಕಾರದ ಗಮನಕ್ಕೆ ತಂದು ಅಗತ್ಯ ಸೌಕರ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ನರೇಗಾ ಯೋಜನೆಯಡಿ ಗ್ರಾಮಸ್ಥರಿಗೆ ಉದ್ಯೋಗ ನೀಡುವಂತೆ ತಾಪಂ ಇಒ ಉಮೇಶ್ ಅವರಿಗೆ ಸಲಹೆ ನೀಡಿದರು.
ಗ್ರಾಮದಿಂದ ನಿರ್ಗಮಿಸುತ್ತಿದ್ದ ವೇಳೆ ತೊಳಸಿಕೆರೆ ಗ್ರಾಮಸ್ಥರು ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೂರಿದೆ. ಆದ್ದರಿಂದ ಮೇವು ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಡಿಸಿ ಅವರು ಮಂಗಳವಾರದಿಂದಲೇ ಮೇವು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಡಿಎಚ್‌ಒ ಡಾ. ಚಿದಂಬರಂ, ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಡಿವೈಎಸ್ಪಿ ಉದೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಅಧಿಕಾರಿ ನವೀನ್ ಮಠದ್, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಂಜಮಣಿ, ಟಿಎಚ್‌ಒ ಡಾ.ಪ್ರಕಾಶ್, ಪಶು ವೈದ್ಯಾಧಿಕಾರಿ ಡಾ. ಸಿದ್ದರಾಜು, ಆಹಾರ ಶಿರಸ್ತೆದಾರ್ ಬಸವರಾಜು, ಪಿಡಿಒ ಕಿರಣ್, ಗ್ರಾಮ ಆಡಳಿತಾಧಿಕಾರಿ ವಿನೋದ್, ಬೇಡಗಂಪಣ ಮುಖಂಡ ಕೆ.ವಿ.ಮಾದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net