

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಏ.6ರಿಂದ 4 ದಿನಗಳ ಕಾಲ ಯುಗಾದಿ ಜಾತ್ರೋತ್ಸವ ಜರುಗಲಿದ್ದು, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ತೇರನ್ನು ಸಿದ್ಧಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಯುಗಾದಿ ಜಾತ್ರಾ ಮಹೋತ್ಸವವು ಏ.6ರಿಂದ ಆರಂಭವಾಗಲಿದ್ದು, ಅಂದು ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. 7 ರಂದು ಸಂಜೆ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಉತ್ಸವಗಳು ನಡೆಯಲಿದೆ. 8 ರಂದು ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ವಿವಿಧ ಉತ್ಸವಗಳು ಜರುಗಲಿದೆ ಹಾಗೂ 9 ರಂದು ಚಂದ್ರಮಾನ ಯುಗಾದಿ ದಿನದಂದು ಬೆಳಗ್ಗೆ 7.30 ರಿಂದ 9 ಗಂಟೆಯವರೆಗೆ ಸಲ್ಲುವ ಶುಭ ಲಗ್ನದಲ್ಲಿ ಮಹಾ ರಥೋತ್ಸವ ಜರುಗಲಿದೆ. ಜಾತ್ರೋತ್ಸವದ ಎಲ್ಲ ಸೇವಾ ಉತ್ಸವಗಳು ಸಾಲೂರು ಬೃಹನ್ಮಠದ ಪೀಠಾಧಿಪತಿ, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ನೆರವೇರಲಿದೆ.
ಪ್ರಾಧಿಕಾರದ ವತಿಯಿಂದ ಅಗತ್ಯ ಸಿದ್ಧತೆ:
ಈ ಜಾತ್ರೆಗೆ ಹೆಚ್ಚಾಗಿ ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಆಗಮಿಸುತ್ತಾರೆ. ಈ ದಿಸೆಯಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಪ್ರಾಧಿಕಾರದ ವತಿಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಕೌದಳ್ಳಿಯಿಂದ ಮ.ಬೆಟ್ಟದವರೆಗೆ ಹಾಗೂ ಪಾಲಾರ್ ಕಡೆಯಿಂದ ಆಗಮಿಸುವ ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ತಮಿಳುನಾಡು ಹಾಗೂ ರಾಜ್ಯದ ವಿವಿಧ ಘಟಕಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ಲಾಸ್ಟಿಕ್ ವಸ್ತುಗಳ ನಿಷೇಧ ಕುರಿತು ಭಕ್ತರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸಲಾಗಿದೆ. ಈಗಾಗಲೇ ಜಾತ್ರೆ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಅವರು ಅಧಿಕಾರಿಗಳ ಸಭೆ ನಡೆಸಿದ್ದು, ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಬಗ್ಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ ಸಿದ್ಧತೆ ಕಾರ್ಯವನ್ನು ಪರಿಶೀಲನೆ ನಡೆಸಿದ್ದು, ಜಾತ್ರೆಯು ಸುಸೂತ್ರವಾಗಿ ನಡೆಸಲು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
ಭಕ್ತರಿಗೆ ಮೂಲ ಸೌಕರ್ಯ:
ಪ್ರಸ್ತುತ ಬಿಸಿಲಿನ ಬೇಗೆ ತಾರಕಕ್ಕೇರಿರುವುದರಿಂದ ಮ.ಬೆಟ್ಟದ ಅಲ್ಲಲ್ಲಿ ಭಕ್ತರಿಗೆ ವಿಶೇಷವಾಗಿ ಮಣ್ಣಿನ ಮಡಕೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಮ.ಬೆಟ್ಟದ ಅರಳಿಮರ, ಗಣಪತಿ ದೇಗುಲ, ಶ್ರೀಶೈಲ ಭವನ, ಲಾಡಿನ ಕೌಂಟರ್ ಸಮೀಪ, ರಂಗಮಂದಿರದ ಆವರಣ, ಸಂಕಮ್ಮ ನಿಲಯ, ಶ್ರೀಶೈಲ ಭವನ ಮುಂಭಾಗ, ಮಾಹಿತಿ ಕೇಂದ್ರದ ಸಮೀಪದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗಿದೆ. ಪರ ಮಾಡುವ (ಅನ್ನಸಂತರ್ಪಣೆ) ಭಕ್ತರಿಗೆ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಅಂತರಗಂಗೆಯ ಸಮೀಪದಲ್ಲಿ ಭಕ್ತರು ಸ್ನಾನ ಮಾಡಲು ಶವರ್‌ಬಾತ್ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜಗೋಪುರದ ಮುಂಭಾಗದಲ್ಲಿ 2 ಕಡೆ ಹಾಗೂ ಭಕ್ತರು ಹೆಚ್ಚು ಸಂದಣಿಯಾಗುವ ಸ್ಥಳಗಳಲ್ಲಿ ಶಾಮಿಯಾನ ಹಾಕಲಾಗಿದೆ. ನಿರಂತರ ದಾಸೋಹ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರ ಸಂಖ್ಯೆಗೆ ಅನುಗುಣವಾಗಿ ಲಾಡು ತಯಾರಿಕೆ ನಡೆಯುತ್ತಿದೆ.
ಕಾಲ್ನಡಿಗೆ ಭಕ್ತರ ಅಗಮನ:
ಈ ಜಾತ್ರೆಗೆ ವಿಶೇಷವಾಗಿ ತಮಿಳುನಾಡು ಕಡೆಗಳಿಂದ ಹೆಚ್ಚಿನ ಭಕ್ತರು ಆಗಮಿಸಲಿದ್ದಾರೆ. ಆದಾಗ್ಯೂ ಕನಕಪುರ, ರಾಮನಗರ ಹಾಗೂ ಚನ್ನಪಟ್ಟಣದ ಕಡೆಗಳಿಂದ ಸಾವಿರಾರು ಭಕ್ತರು ತಾಲೂಕಿನ ದಂಟಳ್ಳಿ ಸಮೀಪದ ಕಾವೇರಿ ನದಿಯನ್ನು ದಾಟಿ ಕೌದಳ್ಳಿ ಮಾರ್ಗದ ಮೂಲಕ ಕಾಲ್ನಡಿಗೆಯಲ್ಲಿ ಆಗಮಿಸಲಿದ್ದು, 3 ದಿನಗಳ ಕಾಲ ಮ.ಬೆಟ್ಟದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ದ್ವಿಚಕ್ರ ವಾಹನಗಳ ನಿಷೇಧವಿಲ್ಲ:
ಕಳೆದ ಮಹಾ ಶಿವರಾತ್ರಿ ಜಾತ್ರೆಯ ವೇಳೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ ಅಪಘಾತ ಸಂಭವಿಸುವ ಸಾಧ್ಯತೆಯನ್ನು ಅರಿತು ಮ.ಬೆಟ್ಟಕ್ಕೆ ಕೌದಳ್ಳಿ ಬಳಿಯೇ ದ್ವಿಚಕ್ರ, ತ್ರಿಚಕ್ರ ವಾಹನಗಳನ್ನು ನಿಷೇಧಿಸಲಾಗಿತ್ತು. ಆದರೆ ಯುಗಾದಿ ಜಾತ್ರೆಯಲ್ಲಿ ವಿನಾಯಿತಿ ನೀಡಲಾಗಿದ್ದು, ದ್ವಿಚಕ್ರ ವಾಹನಗಳು ಸಂಚರಿಸಬಹುದಾಗಿದೆ. ವಾಹನಗಳಿಗೆ ಮ.ಬೆಟ್ಟದಲ್ಲಿ ಪಿಡಬ್ಲುೃಡಿ ಕಚೇರಿ ಎಡಭಾಗ, ಮಹದೇಶ್ವರ ಶಾಲೆ ಮೈದಾನ, ಜೇನುಮಲೆ ಭವನ ಮುಂಭಾಗ, ಹಳೇ ದಾಸೋಹ ಭವನ ಹತ್ತಿರ ಹಾಗೂ ಮೂಡಲಮಲೆ ವಾಣಿಜ್ಯ ಸಂರ್ಕೀಣದ ಎದುರು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಯುಗಾದಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಮಿಳುನಾಡಿನಿಂದ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸುವಂತೆ ಡಿಪೋಗಳಿಗೆ ಪತ್ರ ಬರೆಯಲಾಗಿದೆ. ಪಾಲಾರ್ ಮೂಲಕ ಆಗಮಿಸುವ ಭಕ್ತರಿಗೆ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. 3 ಲಕ್ಷ ಲಾಡು ತಯಾರಿಸಲಾಗುತ್ತಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಾತ್ರೆ ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮ ವಹಿಸಲಾಗಿದೆ.ಎ.ಇ.ರಘುಕಾರ್ಯದರ್ಶಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮ.ಬೆಟ್ಟ.