ವಿಜೃಂಭಣೆಯ ಬೆಟ್ಟಳ್ಳಿ ಮಾರಮ್ಮ ಜಾತ್ರೆ

04 HANUR 1
Published on

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯ ಅಂಗವಾಗಿ ಬುಧವಾರ ಬಿಸಿಲಿನ ಬೇಗೆಯ ನಡುವೆಯೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹರಕೆ ಹೊತ್ತ 104 ಭಕ್ತರು ದೊಡ್ಡ ಬಾಯಿಬೀಗವನ್ನು ಹಾಕಿಸಿಕೊಂಡು ಭಕ್ತಿ ಪರಿಕಾಷ್ಠೆ ಮೆರೆದರು. ಈ ಮೂಲಕ ಬಾಯಿಬೀಗ ಸೇವೆಯು ವಿಜೃಂಭಣೆಯಿಂದ ಜರುಗಿತು.

ಜಾತ್ರಾ ಮಹೋತ್ಸವದಲ್ಲಿ ಬಾಯಿಬೀಗ ಸೇವೆಯು ಹೆಚ್ಚು ಹೆಸರುವಾಸಿ ಪಡೆದಿದ್ದು, ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆಯೇ ಬಾಯಿ ಬೀಗ ಹಾಕಿಸಿಕೊಳ್ಳಲು ಹರಕೆ ಹೊತ್ತಿದ್ದ 104 ಭಕ್ತರು ಮಾಲೆಯನ್ನು ಧರಿಸಿ ದಿನನಿತ್ಯ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದರು. ಬುಧವಾರ ಉಪವಾಸ ಕೈಗೊಂಡಿದ್ದು, ಮಧ್ಯಾಹ್ನ 2ರ ವೇಳೆಯಲ್ಲಿ ಪಟ್ಟಣದ ಆಂಜನೇಯಸ್ವಾಮಿ ದೇಗುಲದ ಬಳಿ ತಮಿಳುನಾಡಿನ ಅರ್ಚಕರಿಂದ ದೊಡ್ಡ ಬಾಯಿಬೀಗವನ್ನು ಹಾಕಿಸಿಕೊಂಡರು. ಈ ವೇಳೆ ಬಾಯಿಬೀಗ ಹಾಕಿಸಿಕೊಳ್ಳುವ ಕುಟುಂಬ ವರ್ಗ ಆಗಮಿಸಿ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರು.

ವಿಜೃಂಭಣೆಯಿಂದ ಜರುಗಿದ ಬಾಯಿಬೀಗ:
ಬೆಳಗ್ಗೆ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಕಬ್ಬಿಣದ ಸಲಾಕೆಗಳಿಗೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 2.15ರ ವೇಳೆಯಲ್ಲಿ ಆಂಜನೇಯಸ್ವಾಮಿ ದೇಗುಲದ ಬಳಿ ಬಾಯಿಬೀಗ ಹಾಕುವ ಅರ್ಚಕರು ಕಬ್ಬಿಣದ ಸಲಾಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಹರಕೆ ಹೊತ್ತಿದ್ದ ಭಕ್ತರಿಗೆ ಅರಿಶಿನ ಮಿಶ್ರಿತ ನೀರನ್ನು ಮೈಮೇಲೆ ಸುರಿದು 20 ಅಡಿ ಉದ್ದದ ಸರಳಿನಿಂದ ಬಾಯಿಬೀಗವನ್ನು ಹಾಕಲಾಯಿತು. ಈ ವೇಳೆ ನೆರೆದಿದ್ದ ಭಕ್ತ ಸಮೂಹ ಕುತೂಹದಿಂದ ವೀಕ್ಷಿಸಿ ಕಣ್ತುಂಬಿಕೊಂಡರು. ಬಾಯಿಬೀಗವನ್ನು ಹಾಕಿಸಿಕೊಂಡ ಭಕ್ತರನ್ನು ವಾದ್ಯಮೇಳದೊಂದಿಗೆ ಆಂಜನೇಯಸ್ವಾಮಿ ದೇಗುಲದಿಂದ ಹಳೇ ಎಂಡಿಸಿಸಿ ರಸ್ತೆ ಹಾಗೂ ಪಟ್ಟಣದ ಬಸ್ ನಿಲ್ದಾಣದ ಮೂಲಕ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಬಿರು ಬಿಸಿಲಿನ ನಡುವೆಯೂ ಕಾಲ್ನಡಿಗೆಯಲ್ಲಿ ಮೆರವಣಿಗೆಯ ಮೂಲಕ ಕರೆ ತರಲಾಯಿತು. ದೇವಿಗೆ ಪೂಜೆ ಸಲ್ಲಿಸಿ ಹರಕೆಯನ್ನು ತೀರಿಸುವುದರ ಮೂಲಕ ಭಕ್ತಿ ಮೆರೆದರು. ಈ ವೇಳೆ ಬಾಯಿಬೀಗ ಸೇವೆಯನ್ನು ವೀಕ್ಷಿಸಲು ದಾರಿಯುದ್ದಕ್ಕೂ ನೆರೆದಿದ್ದ ಜನರು ಬಿಸಿಲಿನ ಬೇಗೆಗೆ ಬಸವಳಿದರು. ಜನರನ್ನು ಚದುರಿಸಲು ಪೊಲೀಸರು ರಸ್ತೆಯುದ್ದಕ್ಕೂ ಹರಸಾಹಸ ಪಟ್ಟರು. ಮೆರವಣಿಗೆಯೂ ಸುಮಾರು 3 ಗಂಟೆಗಳ ಕಾಲ ನಡೆಯಿತು. ಬಸ್ ನಿಲ್ದಾಣದ ಬಳಿ ಸುಮಾರು 1 ಗಂಟೆ ಕಾಲ ಸಂಚಾರ ವ್ಯತಯವಾಗಿತ್ತು.

ಬಿಸಿಲಿನ ಬೇಗೆ:
ಹರಕೆ ಹೊತ್ತ ಭಕ್ತರು ದೊಡ್ಡ ಬಾಯಿಬೀಗವನ್ನು ಹಾಕಿಸಿಕೊಂಡರಲ್ಲದೆ ಸಾವಿರಾರು ಭಕ್ತರು ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಬಾಯಿಬೀಗವನ್ನು ಹಾಕಿಸಿಕೊಂಡರು. ಈ ವೇಳೆ ಸಾಲಿನಲ್ಲಿ ನಿಂತು ಬಿಸಿಲಿನ ಬೇಗೆಯನ್ನು ಅನುಭವಿಸಿದರು. ಬಳಿಕ ಭಕ್ತರು ಆಂಜನೇಯಸ್ವಾಮಿ ದೇಗುಲದಿಂದ ಬೆಟ್ಟಳ್ಳಿ ಮಾರಮ್ಮ ದೇವಾಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ವಿಶೇಷ ಪೂಜೆಯೊಂದಿಗೆ ಹರಕೆ ತೀರಿಸಿದರು.

ಮಾಂಸದ ವ್ಯಾಪಾರ ಜೋರು:
ಜಾತ್ರೆಗೆ ಚಾಲನೆ ನೀಡಿದ 15 ದಿನದಿಂದ ಪಟ್ಟಣದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿತ್ತು. ಹಾಗಾಗಿ ಪಟ್ಟಣದಲ್ಲಿ ಮಾಂಸಾಹಾರ ಹೋಟೆಲ್ ಸೇರಿದಂತೆ ಮಾಂಸದ ಮಾಡುವ ಅಂಗಡಿಗಳು ಬಂದ್ ಆಗಿದ್ದವು. ಆದರೆ ಬುಧವಾರ ಪಟ್ಟಣದ ಪ್ರತಿ ಮನೆಯಲ್ಲೂ ಬಾಡೂಟದ ಅತಿಥ್ಯ ಇದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಜನರು ಮಾಂಸವನ್ನು ಖರೀದಿಸಲು ಸ್ಟಾಲ್‌ಗಳಿಗೆ ಮುಗಿ ಬಿದ್ದರು. ಹಾಗಾಗಿ ಪಟ್ಟಣದಲ್ಲಿ ಮಾಂಸದ ಅಂಗಡಿಗಳಲ್ಲಿ ವ್ಯಾಪಾರ ಬಲು ಜೋರಾಗಿಯೇ ನಡೆಯಿತು.

ಹರಿದು ಬಂದ ಜನಸಾಗರ:
ಬಾಯಿಬೀಗ ಸೇವೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಜನವೋ ಜನ! ಆಗಮಿಸಿದ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಧೂಪ ಹಾಕಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗ ಉಪ್ಪು ಸುರಿದು ದೇವಿ ಕೃಪೆಗೆ ಪಾತ್ರರಾದರು. ದೇವಿಗೆ ನಗದು ಕಾಣಿಕೆ, ದವಸ ಧಾನ್ಯ, ಚಿನ್ನ, ಬೆಳ್ಳಿ, ಸೀರೆ ನೀಡುವುದರ ಮೂಲಕ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು. ದೇಗುಲದ ಆಡಳಿತ ಮಂಡಳಿ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಡಿಆರ್ ಸಿಬ್ಬಂದಿ ಹಾಗೂ ಪೊಲೀಸರಿಂದ ಬಂದೋಬಸ್ತ್ ಒದಗಿಸಲಾಗಿತ್ತು.

ಬಸ್ಸಿಗಾಗಿ ಪರದಾಟ:
ದೊಡ್ಡಬಾಯಿಬೀಗ ಸೇವೆ ಮುಗಿದ ಬಳಿಕ ಪಟ್ಟಣಕ್ಕೆ ಆಗಮಿಸಿದ್ದ ಬಹುತೇಕ ಜನರು ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದರು. ಆದರೆ ಬಸ್ಸಿನ ಕೊರತೆ ಎದುರಾದ ಪರಿಣಾಮ ತೊಂದರೆ ಪಡಬೇಕಾಯಿತು. ಗಂಟೆಗಟ್ಟಲೇ ಕಾಯಬೇಕಾಯಿತು. ಇದರಿಂದಾಗಿ ಕೆಲವರು ಆಟೋಗಳ ಮೂಲಕ ತಮ್ಮ ಊರಿಗೆ ಪ್ರಯಾಣ ಬೆಳೆಸಿದರೆ, ಇನ್ನು ಕೆಲವರು ಆಗಮಿಸಿದ ಬಸ್ಸಿನಲ್ಲಿ ನೂಕುನುಗ್ಗಲಿನಲ್ಲೆ ನಿಂತುಕೊಂಡೇ ಪ್ರಯಾಣ ಬೆಳೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net