ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದ ನೂತನ ತೇರಿಗೆ ಕಳಸ ಪ್ರತಿಷ್ಠಾಪನೆ

01 HANUR 2
Published on

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಏ.2 ರಂದು ಜರುಗುವ ರಥೋತ್ಸವದ ಹಿನ್ನೆಲೆಯಲ್ಲಿ ತಯಾರಿಸಿರುವ ನೂತನ ತೇರಿಗೆ ಸೋಮವಾರ ಕಳಸ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮೈಸೂರಿನ ಮೇಟಗಳ್ಳಿಯ ವೆಂಕಟೇಶ್‌ಮೂರ್ತಿ ನೇತೃತ್ವದ ತಂಡದಿಂದ ತಯಾರಿಸಿರುವ 14.5 ಅಡಿ ಎತ್ತರದ ನೂತನ ತೇರಿನ ಸಮರ್ಪಣೆ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 7.30ರಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ದೇಗುಲದ ಪ್ರಧಾನ ಅರ್ಚಕ ರಾಜೋಜಿರಾವ್ ಸಿಂಧೆ ಸಮ್ಮುಖದಲ್ಲಿ ತಲಕಾಡಿನ ಆಗಮಿಕ ಶ್ರೇಯಸ್ ದೀಕ್ಷಿತ್ ಹಾಗೂ ತಂಡ ದೇಗುಲದ ಮುಂಭಾಗದಲ್ಲಿ ವಾಸ್ತುಹೋಮ, ಪರಿಅಗ್ನಿಕರಣ, ಆದಿವಾಸ, ಶ್ರೇಯಾಧಿವಾಸ ಹೋಮ ಹಾಗೂ ಅಷ್ಟವರ್ಧನ ಸೇವೆಯನ್ನು ನೆರವೇರಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಈ ಕಾರ್ಯ ತಡರಾತ್ರಿ 1.30ರವೆರೆಗೂ ನಡೆಯಿತು.

ಸೋಮವಾರ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ, ನಾಡಿ ಸಂಧಾನ, ಸ್ಪರ್ಶಹೋಮ, ನೇತ್ರೋನ್ಮಿಲನ, ಪ್ರಾಣ ಪ್ರತಿಷ್ಠೆ ಹಾಗೂ ಕುಂಭಾಭಿಷೇಕವನ್ನು ನೆರವೇರಿಸಿ ಮಹಾ ಮಂಗಳಾರತಿ ಬೆಳಗಿಸಿದ ಬಳಿಕ 9ರಲ್ಲಿ ತೇರಿಗೆ ಕಳಸವನ್ನು ಪ್ರತಿಷ್ಠಾಪಿಸಲಾಯಿತು. ಈ ವೇಳೆ ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು. ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net