ಮಹದೇವಪ್ಪ ಹೇಳಿಕೆ ಬೇಸರ ತರಿಸಿದೆ

SHIVAKUMAR
Published on

ಹನೂರು: ಚಾಮರಾಜನಗರದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಭೆಯಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಮುಂದಿನ ದಿನಗಳಲ್ಲಿ ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ನಮ್ಮೊಂದಿಗೆ ಕೈಜೋಡಿಸುತ್ತಾರೆ ಎಂದು ಹೇಳಿರುವುದು ಹನೂರು ಕ್ಷೇತ್ರದ ಕಾಂಗ್ರೆಸ್ಸಿಗರಲ್ಲಿ ನೋವುಂಟು ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.

ದಿವಂಗತ ರಾಜೂಗೌಡ ಅವರ ಕುಟುಂಬ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದೆ. ಇತ್ತ ಕಳೆದ 3 ಲೋಕಸಭೆ ಚುನಾವಣೆಯಲ್ಲೂ ಹನೂರು ಕ್ಷೇತ್ರದಿಂದ ಹೆಚ್ಚು ಮತಗಳನ್ನು ಕೊಡಿಸುವಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಶ್ರಮಿಸಿದ್ದಾರೆ. ಜತೆಗೆ ಮುಂಬರುವ ಲೋಕಸಭೆ ಚುನಾವಣೆಗೆ ಕಾರ್ಯಕರ್ತರ ಜತೆಗೂಡಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ. ಇನ್ನು ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪ್ರಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಈ ರೀತಿ ಮಾತನಾಡಿರುವುದು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರ ತಂದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಪಂ ಸದಸ್ಯ ಹರೀಶ್‌ಕುಮಾರ್ ಮಾತನಾಡಿದರು. ಚಾಮುಲ್ ನಿರ್ದೇಶಕರಾದ ನಂಜುಂಡಸ್ವಾಮಿ, ಶಾಹುಲ್ ಆಹಮದ್, ಪಪಂ ಸದಸ್ಯರಾದ ಹರೀಶ್, ಸುದೇಶ್, ಪಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಮಾಜಿ ಸದಸ್ಯ ಮಾದೇಶ್, ಮುಖಂಡರಾದ ವಿಷ್ಣುಕುಮಾರ್, ಮಂಗಲ ಪುಟ್ಟರಾಜು, ಮಹೇಶ್, ನಟರಾಜು, ನಾಗಣ್ಣ, ಮಣಿ, ಮಂಜೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net