ಪಟ್ಟಣ ಪಂಚಾಯಿತಿ ಆಯವ್ಯಯ ಮಂಡನೆ

11 HANUR 2
Published on

ಹನೂರು: ಆರಂಭಿಕ ಶಿಲ್ಕು ಸೇರಿದಂತೆ 2024-25ನೇ ಸಾಲಿನ ಆಯವ್ಯಯದಲ್ಲಿ ಆದಾಯ ಹಾಗೂ ವೆಚ್ಚ ಕಳೆದು 40.48 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ತಿಳಿಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ಧ 2024-25ನೇ ಸಾಲಿನಲ್ಲಿ ಬಜೆಟ್ ಮಂಡನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 13 ವಾರ್ಡ್‌ಗಳಿದ್ದು, ಸುಮಾರು 12 ಸಾವಿರಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಹಾಗಾಗಿ ಪಟ್ಟಣದ ಅಭಿವೃದ್ಧಿ ಹೊಂದಬೇಕಾದರೆ ವಿವಿಧ ಮೂಲಗಳಿಂದ ಆದಾಯವನ್ನು ಸಂಗ್ರಹಿಸಬೇಕಿದೆ. ಈ ದಿಸೆಯಲ್ಲಿ ಆಸ್ತಿ ತೆರಿಗೆಯಿಂದ 1.02 ಕೋಟಿ ರೂ. ಕಟ್ಟಡ ಪರವಾನಗಿ, ಅಭಿವೃದ್ಧಿ ಶುಲ್ಕಗಳಿಂದ 66.50 ಲಕ್ಷ ರೂ., ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ 20 ಲಕ್ಷ ರೂ., ವಾಹನ ನಿಲುಗಡೆ ಶುಲ್ಕದಿಂದ 15 ಲಕ್ಷ ರೂ., ನೀರಿನ ಶುಲ್ಕದಿಂದ 12.42 ಲಕ್ಷ ರೂ., ಖಾತೆ ಬದಲಾವಣೆ ಶುಲ್ಕದಿಂದ 3.25 ಲಕ್ಷ ರೂ. ಸೇರಿದಂತೆ ಇನ್ನಿತರ ಮೂಲಗಳಿಂದ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದರು.

ಹಾಗೆಯೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನ 2 ಕೋಟಿ ರೂ., ಸ್ವಚ್ಛ ಭಾರತ್ ಅಭಿಯಾನ 75 ಲಕ್ಷ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನ 72 ಲಕ್ಷ ರೂ., ಎಸ್‌ಎಫ್‌ಸಿ ವೇತನ ಅನುದಾನ 69 ಲಕ್ಷ ರೂ., 15ನೇ ಹಣಕಾಸು 64 ಲಕ್ಷ ರೂ. ಅನುದಾನ, ಬರ ಪರಿಹಾರ 55 ಲಕ್ಷ ರೂ., ಮುಕ್ತ ನಿಧಿ ಅನುದಾನ 29 ಲಕ್ಷ ರೂ. ಸೇರಿದಂತೆ ಇನ್ನಿತರ ಯೋಜನೆಯಡಿ ಅನುದಾನ ಲಭಿಸಲಿದೆ ಎಂದು ತಿಳಿಸಿದರು.
ಇನ್ನು ಪ್ರಮುಖ ವೆಚ್ಚವಾಗಿ ರಸ್ತೆ, ಪಾದಚಾರಿ ಮಾರ್ಗ ಹಾಗೂ ಚರಂಡಿ ಅಭಿವೃದ್ಧಿಗಾಗಿ 4 ಕೋಟಿ ರೂ., ಶೌಚಗೃಹ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ 2 ಕೋಟಿ ರೂ., ಸ್ಮಶಾನ ಅಭಿವೃದ್ಧಿಗಾಗಿ 1 ಕೋಟಿ ರೂ., ವಿದ್ಯುತ್ ಶುಲ್ಕ 72 ಲಕ್ಷ ರೂ., ನೈರ್ಮಲ್ಯ ವಾಹನಗಳ ಖರೀದಿಗಾಗಿ 85 ಲಕ್ಷ ರೂ., ಘನ ತ್ಯಾಜ್ಯ ಘಟಕದ ಅಭಿವೃದ್ಧಿಗಾಗಿ 55 ಲಕ್ಷ ರೂ., ನೀರು ಸರಬರಾಜು ಕಾಮಗಾರಿಗಾಗಿ 49 ಲಕ್ಷ ರೂ. ಸೇರಿದಂತೆ ಇನ್ನಿತರ ಖರ್ಚು-ವೆಚ್ಚದ ಕಾಮಗಾರಿಗಳನ್ನು ಒಳಗೊಂಡಿದೆ. ಆದ್ದರಿಂದ ಪಟ್ಟಣದ ಅಭಿವೃದ್ಧಿಗಾಗಿ ಸಿದ್ಧಪಡಿಸಿರುವ ಈ ಆಯವ್ಯಯಕ್ಕೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು.

ಕುಡಿಯುವ ನೀರಿನ ಸಮಸ್ಯೆ ನೀಗಿಸಿ: ಪಟ್ಟಣದ ವಿದ್ಯುತ್ ಕಂಬಗಳಲ್ಲಿ ಸಮರ್ಪಕ ಬೀದಿ ದೀಪದ ವ್ಯವಸ್ಥೆ ಇಲ್ಲ. ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಬೇಸಿಗೆ ಮುನ್ನವೇ ಕೆಲವೊಂದು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜನರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು. ಜತೆಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು. ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಆರ್. ಅಶೋಕ್, ಸದಸ್ಯರು ಹಾಗೂ ಪಪಂ ಅಧಿಕಾರಿಗಳು, ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net