ಮಾದಪ್ಪನಿಗೆ ಅಮಾವಾಸ್ಯೆ ವಿಶೇಷ ಪೂಜೆ

IMG_20240310_134504
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಜಾತ್ರೆಯ 4ನೇ ದಿನದ ಅಂಗವಾಗಿ ಭಾನುವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದ್ದು, ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ, ದೇಗುಲವನ್ನು ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು. ಬೆಳಗಿನ ಜಾವ 3ರಿಂದ 6.30ರವರೆಗೆ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ಅಭಿಷೇಕದ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಅಮಾವಾಸ್ಯೆ ವಿಶೇಷ ಪೂಜೆ: ಬೆಳಗ್ಗೆ ಉಪವಾಸವಿದ್ದ ಬೇಡಗಂಪಣ ಸರದಿ ಅರ್ಚಕರು ಛತ್ರಿ, ಚಾಮರ ಹಾಗೂ ಮಂಗಳ ವಾದ್ಯಮೇಳದೊಂದಿಗೆ ದೇಗುಲ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿ ಆಗ್ರೋದಕ ಹಾಗೂ ಬಾಯಿಗೆ ಬಟ್ಟೆ ಕಟ್ಟಿಕೊಂಡು ಕರೆದ ಹಾಲನ್ನು ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದರು. ಸ್ವಾಮಿಗೆ ಸಂಕಲ್ಪಾಧಿ, ಗಣಪತಿ ಪೂಜೆ, ಪಂಚಕಳಸ ಪೂಜೆ, ಏಕವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿಯ ಮೂಲಕ ಹಾಲಿನ ಅಭಿಷೇಕ ನೆರವೇರಿಸಿದರು. ಬಳಿಕ 2ನೇ ಅಭಿಷೇಕದ ವಿಶೇಷ ಪೂಜೆಯಲ್ಲಿ ಮಾದಪ್ಪನಿಗೆ ಅಭಿಷೇಕ ಅರ್ಚನೆ, ಏಕವಾರು ರುದ್ರಾಭಿಷೇಕ, ಸಂಕಲ್ಪ ಬಿಲ್ವಾರ್ಚನೆ, ನವರತ್ನ ಕೀರಿಟ ಧಾರಣೆ, ಧೂಪದಾರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸುವುದರ ಮೂಲಕ ಮಾದಪ್ಪನಿಗೆ ಮಹಾ ಶಿವರಾತ್ರಿ ಅಮಾವಾಸ್ಯೆ ಪೂಜೆ ನೆರವೇರಿಸಲಾಯಿತು.

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು:
ಮಹಾಶಿವರಾತ್ರಿ ಜಾತ್ರೆ ಹಾಗೂ ಸರ್ಕಾರಿ ಸಾಲು ರಜೆಯ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮ.ಬೆಟ್ಟದಲ್ಲಿ ಲಕ್ಷಾಂತರ ಭಕ್ತರು ಬೀಡುಬಿಟ್ಟಿದ್ದಾರೆ. ಇದರ ಜತೆಗೆ ಭಾನುವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅದರಲ್ಲೂ ಶಕ್ತಿ ಯೋಜನೆಯ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಭಕ್ತರು ಅಂತರಗಂಗೆಯ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಿ, ಧೂಪ ಹಾಕಿ ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ದೇವರ ದರ್ಶನ ಪಡೆಯಲು ಭಕ್ತರು ಅದರಲ್ಲೂ ವೃದ್ಧರು ಗಂಟೆಗಟ್ಟಲೇ ಕಾದು ನಿಂತು ತೊಂದರೆ ಅನುಭವಿಸಿದರು. ಇನ್ನು ಕೆಲ ಭಕ್ತರು 500 ರೂ. ಟಿಕೆಟ್ ಪಡೆದು ರಾಜಗೋಪುರದ ವಿಶೇಷ ಕೌಂಟರ್ ಮೂಲಕ ತೆರಳಿ ಸ್ವಾಮಿಯ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಬಸವ, ರುದ್ರಾಕ್ಷಿ, ಹುಲಿವಾಹನ ಸೇವೆ ಹಾಗೂ ಇನ್ನಿತರ ಉತ್ಸವಗಳಲ್ಲಿ ಭಾಗಿಯಾಗಿದ್ದರು. ಮುಡಿಸೇವೆ, ಉರುಳು ಸೇವೆ, ಪಂಜಿನ ಸೇವೆಯನ್ನು ನೆರವೇರಿಸಿ ಮಾದಪ್ಪನ ಕೃಪೆಗೆ ಪಾತ್ರರಾದರು. ಇತ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಲಾಡು ಮಾರಾಟ ಕೇಂದ್ರದಲ್ಲಿ ನೂಕುನುಗ್ಗಲು ಉಂಟಾಯಿತು. ದೇಗುಲದ ಸರತಿ ಸಾಲು, ದಾಸೋಹ ಭವನ ಹಾಗೂ ದೇಗುಲದ ಆವರಣದಲ್ಲಿ ಭಕ್ತರನ್ನು ನಿಯಂತ್ರಿಸಲು ಪೊಲೀಸರು, ಗೃಹರಕ್ಷಕ ಸಿಬ್ಬಂದಿ ಹರಸಾಹಸಪಟ್ಟರು.

ಪಂಕ್ತಿಸೇವೆ, ಅನ್ನ ಸಂತರ್ಪಣೆ:
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಮ.ಬೆಟ್ಟದಲ್ಲಿ ಬೀಡುಬಿಟ್ಟಿದ್ದು, ಹರಕೆಹೊತ್ತ ಭಕ್ತರು ಪರ (ಅನ್ನ ಸಂತರ್ಪಣೆ) ನಡೆಸಿದರೆ, ಜಿಲ್ಲೆಯ ವಿವಿಧ ಹಳ್ಳಿಗಳಿಂದ ಆಗಮಿಸಿದ ಭಕ್ತರು ಒಂದೆಡೆ ಸೇರಿ ಪ್ರತಿ ಕುಟುಂಬದಿಂದ ಹಣವನ್ನು ಸಂಗ್ರಹಿಸಿ ಅಡುಗೆ ತಯಾರಿಸಿ ಸಹಭೋಜನ ಸವಿಯುವುದರ ಮೂಲಕ ಪಂಕ್ತಿಸೇವೆ ನೆರವೇರಿಸಿದರು. ಅಲ್ಲದೆ ಸಂಘ- ಸಂಸ್ಥೆಗಳು, ದಾನಿಗಳು ಅಲ್ಲಲ್ಲಿ ಅನ್ನ ಸಂತರ್ಪಣೆ ಮಾಡಿದರು.

ಕಡಲೆ, ಬೆಲ್ಲ ಹಂಚಿಕೆ:
ಪರ ಸೇವೆಯನ್ನು ನೆರವೇರಿಸಿದ ಭಕ್ತರು ಹುರಿಗಡಲೆ, ಕೊಬ್ಬರಿಕಾಯಿ ಹಾಗೂ ಬೆಲ್ಲವನ್ನು ಮಿಶ್ರಣ ಮಾಡಿ, ದೇಗುಲದ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ದೇಣಿಗೆ ನೀಡಿದ್ದ ಕುಟುಂಬಸ್ಥರಿಗೆ ಹಂಚಿದರು. ಇದು ಹಿಂದಿನಿಂದಲೂ ಬೆಳೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಈ ಪ್ರಸಾದವನ್ನು ಹಂಚುತ್ತಿದ್ದು, ಮನೆಯಲ್ಲಿ ಎಡೆ ಇಡುವುದರ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ಕುಟುಂಬಕ್ಕೆ ಮಾದಪ್ಪ ಒಳ್ಳೆಯದನ್ನು ಕರುಣಿಸುತ್ತಾನೆ ಎಂಬುದು ಭಕ್ತರ ನಂಬಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net