

ಹನೂರು: ತಾಲೂಕಿನ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ಆಗಮಿಸಿದ ತುಮಕೂರು ಜಿಲ್ಲೆ ತಿಪಟೂರಿನ 102 ವರ್ಷದ ಶತಾಯುಷಿ ಅಜ್ಜಿ ಪಾರ್ವತಮ್ಮ ಅವರನ್ನು ಶನಿವಾರ ಸಾಲೂರು ಬೃಹನ್ಮಠದಲ್ಲಿ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಫಲತಾಂಬೂಲ ನೀಡಿ ಸನ್ಮಾನಿಸಿದರು.
ಕಳೆದ ಐದಾರು ವರ್ಷಗಳಿಂದ ಮಹಾ ಶಿವರಾತ್ರಿ ವೇಳೆ ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಕಾಲ್ನಡಿಗೆಯ ಮೂಲಕ ಆಗಮಿಸುತ್ತಿರುವ ವೃದ್ಧೆಯನ್ನು ಮಾ.6 ರಂದು ಮಾರ್ಗಮಧ್ಯದಲ್ಲಿ ಭಕ್ತರೊಬ್ಬರು ವಿಡಿಯೋ ಚಿತ್ರೀಕರಿಸಿದ್ದರು. ಈ ವೇಳೆ ಅಜ್ಜಿ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ದೇವರ ದರ್ಶನ ಪಡೆದು ಕಳೆದ 2 ದಿನಗಳಿಂದ ಸಾಲೂರು ಮಠದಲ್ಲಿ ತಂಗಿದ್ದ ಈ ಅಜ್ಜಿಯನ್ನು ಶನಿವಾರ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಯೋಗಕ್ಷೇಮ ವಿಚಾರಿಸಿ ಪಾದಯಾತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತಾಂಬೂಲ ನೀಡಿ ಗೌರವಿಸಿದರು. ಈ ವೇಳೆ ಶ್ರೀಗಳ ಪ್ರಶ್ನೆಗೆ ಅಜ್ಜಿ ಪ್ರತಿಕ್ರಿಯಿಸಿ, ಕಾಲ್ನಡಿಗೆಯಲ್ಲಿ ಬರುವಾಗ ಯಾವುದೇ ತೊಂದರೆಯಾಗಲಿಲ್ಲ. ದಾರಿಯುದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವರ ದರ್ಶನವೂ ಸುಸೂತ್ರವಾಗಿ ಆಯಿತು ಎಂದರು. ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಇದ್ದರು.