ಬಾಯಿಬೀಗ ಹಾಕಿಸಿಕೊಂಡ ಭಕ್ತರಿಂದ ಮೆರವಣಿಗೆ

Published on

ಹನೂರು: ಮಹಾಶಿವರಾತ್ರಿ ಹಬ್ಬದ ವಿಶೇಷವಾಗಿ ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಶ್ರೀ ಸಂಪಿಗೇಶ್ವರ ಸ್ವಾಮಿ ದೇಗುಲದಲ್ಲಿ ಬಾಯಿಬೀಗ ಹಾಕಿಸಿಕೊಂಡ ಭಕ್ತರ ಮೆರವಣಿಗೆ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಮಹಾ ಶಿವರಾತ್ರಿ ಅಂಗವಾಗಿ ದೇಗುಲವನ್ನು ವಿವಿಧ ಪುಷ್ಪ, ತಳಿರು-ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ದೇಗುಲದಲ್ಲಿ ವಿವಿಧ ಅಭಿಷೇಕ ನೆರವೇರಿಸಿದ ಬಳಿಕ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ನೈವೇದ್ಯ ಅರ್ಪಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಬಳಿಕ 9 ಗಂಟೆಗೆ ಅರ್ಚಕರು ಹಾಗೂ ಗ್ರಾಮಸ್ಥರು ಸತ್ತಿಗೆ, ಸೂರಪಾನಿ ಹಾಗೂ ಮಂಗಳವಾದ್ಯದೊಂದಿಗೆ ಮಾರಮ್ಮನ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಹರಕೆ ಹೊತ್ತು ಉಪವಾಸವಿದ್ದ ಪುರುಷ ಹಾಗೂ ಮಹಿಳಾ ಭಕ್ತರು ಬಾಯಿಬೀಗವನ್ನು ಹಾಕಿಸಿಕೊಂಡರು. ಬಳಿಕ ಕಳಸ ಹೊತ್ತ ಹೆಣ್ಣು ಮಕ್ಕಳೊಂದಿಗೆ ಬಾಯಿ ಬೀಗ ಹಾಕಿಸಿಕೊಂಡ ಭಕ್ತರು ಮೆರವಣಿಗೆಯ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀ ಸಂಪಿಗೇಶ್ವರ ದೇಗುಲವನ್ನು ತಲುಪಿ ದೇವರಿಗೆ ಪೂಜೆ ಸಲ್ಲಿಸುವುದರ ಮೂಲಕ ಭಕ್ತಿ ಭಾವ ಮೆರೆದರು. ಶಿವರಾತ್ರಿ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ದೇಗುಲದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net