ಗಾಂಜಾ ಸಾಗಿಸುತ್ತಿದ್ದವನ ಬಂಧನ

06 HANUR 2
Published on

ಹನೂರು: ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಬುಧವಾರ ರಾಮಾಪುರ ಪೊಲೀಸರು ವಡಕೆಹಳ್ಳ ಗ್ರಾಮದ ಬಳಿ ಬಂಧಿಸಿದ್ದಾರೆ.

ತಾಲೂಕಿನ ಶೆಟ್ಟಳ್ಳಿ ಗ್ರಾಮದ ಶಿವಕುಮಾರ್ ಆಲಿಯಾಸ್ ಜ್ಯೂಸ್ ಶಿವು (44) ಬಂಧಿತ ಆರೋಪಿ. ಈತ ಮಹದೇಶ್ವರಬೆಟ್ಟದಲ್ಲಿ ಮಾರಾಟ ಮಾಡುವ ಸಲುವಾಗಿ ಗ್ರಾಮದಿಂದ ಕುರಟ್ಟಿ ಹೊಸೂರು ಮಾರ್ಗದ ಕಾಡು ದಾರಿಯಲ್ಲಿ ಚಿಕ್ಕ ಚೀಲದಲ್ಲಿ ಗಾಂಜಾ ತುಂಬಿಕೊಂಡು ತೆರಳುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಎಸ್ಸಿ ಪದ್ಮಿನಿ ಸಾಹೂ, ಡಿವೈಎಸ್ಪಿ ಸೋಮೇಗೌಡ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್, ಸಬ್‌ಇನ್ಸ್‌ಪೆಕ್ಟರ್ ರಾಧಾ ಹಾಗೂ ಸಿಬ್ಬಂದಿ ವಡಕೆಹಳ್ಳದ ಬಳಿ ಆರೋಪಿಯನ್ನು ಬಂಧಿಸಿ, 940 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಮುಖ್ಯಪೇದೆಗಳಾದ ಸಿದ್ದೇಶ್, ನಾಗೇಂದ್ರ, ಪೇದೆಗಳಾದ ಮಹೇಂದ್ರ ಹಾಗೂ ಮಂಜು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net