

ಹನೂರು: ಕಾವೇರಿ ನದಿ ನೀರು ಸೇರುವ ತಮಿಳುನಾಡಿನ ಅಡಿಪಾಲಾರ್‌ನ ಹಿನ್ನೀರಿನ ನದಿ ದಡದಲ್ಲಿ ಗುರುವಾರ ಮಲೆ ಮಹದೇಶ್ವರಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ವಿದ್ವಾನ್ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾವೇರಿ ಮಾತೆಗೆ ಗಂಗಾರತಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ನದಿ ಕರ್ನಾಟಕದ ಜೀವನದಿ. ಮೈಸೂರು, ನರಸೀಪುರ, ಸತ್ತೇಗಾಲ, ಮೇಕೆದಾಟು, ಹೊಗೇನಕಲ್ ಫಾಲ್ಸ್ ಹಾದು ಅಡಿಪಾಲಾರ್ ಎಂಬಲ್ಲಿ ಸಂಗಮವಾಗಿ ತಮಿಳುನಾಡಿನ ಮೂಲಕ ಬಂಗಾಳಕೊಲ್ಲಿ ಸೇರುತ್ತದೆ. ಈ ನದಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ 765 ಕಿ.ಮೀ.ವರೆಗೂ ಹರಿಯುತ್ತದೆ. ರಾಜ್ಯದಲ್ಲಿ ಕೆಆರ್‌ಎಸ್‌ನಲ್ಲಿ ಜಲಾಶಯ ನಿರ್ಮಿಸಿದರೆ, ತಮಿಳುನಾಡಿನಲ್ಲಿ ಮೆಟ್ಟೂರಿನಲ್ಲಿ ಡ್ಯಾಂ ನಿರ್ಮಿಸಲಾಗಿದೆ. ಹಾಗಾಗಿ ಕಾವೇರಿ ನದಿ 2 ರಾಜ್ಯಗಳಿಗೂ ನೀರಿನ ಮುಖ್ಯ ಮೂಲವಾಗಿದೆ. ಹಾಗಾಗಿ ಕಳೆದ 4 ವರ್ಷಗಳಿಂದಲೂ ಸಾಲೂರು ಶ್ರೀಗಳ ಸಾನ್ನಿಧ್ಯ ಹಾಗೂ ತಮಿಳುನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಗಂಗಾರತಿಯನ್ನು ಬೆಳಗಿಸಲಾಗುತ್ತಿದೆ.
ಉತ್ತಮ ಮಳೆ -ಬೆಳೆಯಾಗುವುದರ ಮೂಲಕ ನಾಡು ಸಮೃದ್ಧಿಯಿಂದ ಕೂಡಿರಲಿ. ಮ.ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಸಕಲವನ್ನು ಉಂಟು ಮಾಡಲಿ. ಯಾವುದೇ ಸಮಸ್ಯೆ ಉಂಟಾಗದಂತೆ ಕಾವೇರಿ ಮಾತೆ ಎಲ್ಲರನ್ನು ಕಾಪಾಡಲೆಂದು ಪ್ರತಿ ವರ್ಷ ತಮಿಳುನಾಡಿನ ವಿವಿಧ ಮಠದ ಸ್ವಾಮೀಜಿಗಳು, ಸಾಲೂರು ಬೃಹನ್ಮಠದ ಶ್ರೀಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಅಡಿಪಾಲಾರ್ ಬಳಿಯ ಕಾವೇರಿ ಹಿನ್ನೀರಿನ ನದಿ ದಡದಲ್ಲಿ ಗಂಗಾರತಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಅದರಂತೆಯೇ ಈ ವರ್ಷವೂ ಸಾಲೂರು ಬೃಹನ್ಮಠದ ಶ್ರೀಗಳ ಸಮ್ಮುಖದಲ್ಲಿ ಗಣಪತಿ ಪೂಜೆ, ಪುಣ್ಯಗಣ ಹೋಮ, ರುದ್ರಹೋಮ, ಇನ್ನಿತರ ಹೋಮಗಳನ್ನು ನೆರವೇರಿಸಿ ಕಳಸ ಆರಾಧನೆಯೊಂದಿಗೆ ಕಾವೇರಿ ಮಾತೆಗೆ ಗಂಗಾ ಆರತಿ ಪೂಜೆ ಸಲ್ಲಿಸಲಾಯಿತು.
ವಿದ್ವಾನ್ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿ, ರಾಜ್ಯ ಹಾಗೂ ದೇಶದಲ್ಲಿ ಸಕಾಲಕ್ಕೆ ಉತ್ತಮ ಮಳೆ, ಬೆಳೆಯಾಗಿ ಸದಾ ಸುಭಿಕ್ಷದಿಂದ ಕೂಡಿರಲಿ. ಯಾವುದೇ ಅವಘಡಗಳು ಸಂಭವಿಸದಂತೆ, ಜನತೆಗೆ ರೋಗ-ರುಜಿನಗಳು ತಗುಲದಂತೆ, ಎದುರಾಗುವ ಕಷ್ಟ ಕಾರ್ಪಣ್ಯಗಳನ್ನು ತೊಡೆದು ಹಾಕುವಂತೆ ಹಾಗೂ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಬಾಧೆ ಬಾರದಂತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುವ ಸಲುವಾಗಿ ಕಾವೇರಿ ನದಿ ದಡದಲ್ಲಿ ಗಂಗಾರತಿ ಪೂಜೆ, ಹೋಮ-ಹವನ ನೆರವೇರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಗಂಗಾರತಿ ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
ಸಾಮರಸ್ಯದ ಪ್ರತೀಕ: ನಾಡಿನ ಸಮೃದ್ಧಿಯ ದೃಷ್ಟಿಯಿಂದ ಪ್ರತಿ ವರ್ಷವೂ ಕಾವೇರಿ ಮಾತೆಗೆ ಕರ್ನಾಟಕ ಹಾಗೂ ತಮಿಳುನಾಡಿನ ಭಕ್ತರು ಗಂಗಾರತಿ ಪೂಜೆ ನೆರವೇರಿಸಿಕೊಂಡು ಬರುತ್ತಿರುವುದು ಒಂದೆಡೆಯಾದರೆ, ಮತ್ತೊಂದಡೆ ಸಾಮರಸ್ಯ, ಸಹಬಾಳ್ವೆಯಿಂದ ಪರಸ್ಪರ ಉತ್ತಮ ಒಡನಾಟ ಹೊಂದುವ ಮೂಲಕ ಜೀವನ ನಡೆಸಲು ಗಂಗೆಪೂಜೆ ಸಹಕಾರಿಯಾಗಿದೆ. ಈ ಬಗ್ಗೆ 2 ರಾಜ್ಯದ ಜನರಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದು ಮೆಚ್ಚುಗೆಯ ಸಂಗತಿ ಎಂದರು.