

ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಬಳಿ ಭಾನುವಾರ ಸಂಜೆ ಸಂಭವಿಸಿದ ಬೈಕ್ ಅಪಘಾತದಲ್ಲಿ ತಂದೆ ಮೃತಪಟ್ಟರೆ, ಪುತ್ರ ಗಾಯಗೊಂಡಿದ್ದಾರೆ.
ಲೊಕ್ಕನಹಳ್ಳಿಯ ಟಿ.ಎಂ.ಮಣಿ (64) ಮೃತರು. ಪುತ್ರ ಹರಿ ಅಖಿಲೇಶ್ (21) ಗಾಯಗೊಂಡವರು. ಇವರಿಬ್ಬರು ಸಂಜೆ ಗ್ರಾಮದ ಹೊರ ವಲಯದಲ್ಲಿನ ತೋಟದಲ್ಲಿ ವಾಸವಾಗಿರುವ ಸಂಬಂಧಿಕರ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ದೊಡ್ಡಸಂಪಿಗೆ ದೇಗುಲ ಸಮೀಪದ ತಿರುವಿನಲ್ಲಿ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ತೀವ್ರ ಗಾಯಗೊಂಡರೆ, ಪುತ್ರನಿಗೆ ಕೈ, ಕಾಲು ಹಾಗೂ ಮುಖ ಭಾಗಕ್ಕೆ ಸಣ್ಣಪುಟ್ಟ ಪೆಟ್ಟಾಗಿತ್ತು. ಗಾಯಗೊಂಡ ಇಬ್ಬರನ್ನು ಕುಟುಂಬಸ್ಥರು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಮಾರ್ಗಮಧ್ಯೆ ಮಣಿ ಮೃತಪಟ್ಟರು.
ಮೃತರ ಪುತ್ರ ಹರಿ ಅಖಿಲೇಶ್ ನೀಡಿದ ದೂರಿನ ಮೇರೆಗೆ ಹನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಸೋಮವಾರ ಮೃತದೇಹವನ್ನು ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಸುದ್ದಿ ತಿಳಿದು ಮಾಜಿ ಶಾಸಕರಾದ ಆರ್.ನರೇಂದ್ರ ಹಾಗೂ ಪರಿಮಳಾ ನಾಗಪ್ಪ ಅವರು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.