

ಹನೂರು : ತಾಲೂಕಿನ ಪಿ.ಜಿ.ಪಾಳ್ಯದಿಂದ ಚಿಕ್ಕರಂಗಶೆಟ್ಟಿ ಕ್ರಾಸ್‌ವರೆಗೆ ತೀರಾ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕು ಕೇಂದ್ರದಿಂದ 20 ಕಿ.ಮೀ.ಅಂತರವನ್ನು ಹೊಂದಿರುವ ಪಿ.ಜಿ.ಪಾಳ್ಯ ಗ್ರಾಮದ ಮೂಲಕ ಜೋರೆದೊಡ್ಡಿ, ಹುಯಿಲನತ್ತ, ಜಡೇಗೌಡನ ದೊಡ್ಡಿ, ಶೇಷಾದ್ರಿ ದೊಡ್ಡಿ, ಪೀಕನಾಯ್ಕನ ದೊಡ್ಡಿ, ಕೆರೆದೊಡ್ಡಿ, ಮರಿಗೌಡನ ದೊಡ್ಡಿ, ಮಾಲಿಂಗನತ್ತ, ಕುಡುವಾಳೆ, ಚಿಕ್ಕರಂಗಶೆಟ್ಟಿ ಕ್ರಾಸ್ ಸೇರಿದಂತೆ ಈ ಭಾಗದ ಇನ್ನಿತರ ಗ್ರಾಮಗಳಿಗೆ ಈ ರಸ್ತೆಯು ಸಂಪರ್ಕ ಕಲ್ಪಿಸುತ್ತಿದ್ದು, 8 ಕಿ.ಮೀ.ಅಂತರವನ್ನು ಹೊಂದಿದೆ.
ದಶಕದ ಹಿಂದೆ ಈ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗಿತ್ತು. ಅದರೆ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಈ ರಸ್ತೆಯ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಜಲ್ಲಿಕಲ್ಲುಗಳು ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿವೆ. ಪರಿಣಾಮ ಬೈಕ್ ಸವಾರರು ಕಲ್ಲು ಹಾಗೂ ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ಆಗಾಗ್ಗೆ ಜರುಗುತ್ತಲೇ ಇವೆ. ಸಂಚಾರದಿಂದ ಜಲ್ಲಿಕಲ್ಲುಗಳು ಪುಟಿದೇಳುತ್ತಿದ್ದು, ಜೀವಭಯ ಮನೆ ಮಾಡಿದೆ. ಇತ್ತ ಮಳೆ ಬಂದ ವೇಳೆ ಹಲವು ದಿನಗಳವರೆಗೆ ಗುಂಡಿಗಳಲ್ಲಿ ನೀರು ನಿಲ್ಲುವಂತಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಕೆಲವು ಕಡೆಗಳಲ್ಲಿ ಬೈಕ್ ಸವಾರರು ರಸ್ತೆಯನ್ನು ಬಿಟ್ಟು ಬದಿಯಲ್ಲಿ ಸಂಚರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರು ತುಂಬಾ ತೊಂದರೆಪಡುವಂತಾಗಿದೆ.
ರಸ್ತೆ ಅಭಿವೃದ್ಧಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿಪಡಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಪಿ.ಜಿ.ಪಾಳ್ಯ ಗ್ರಾಮದ ಬಸವಣ್ಣ ಒತ್ತಾಯಿಸಿದ್ದಾರೆ.