

ಹನೂರು:‘ನನಗೆ ಕಾಡುಗಳ್ಳ ವೀರಪ್ಪನ್ ಅಟ್ಟಹಾಸ ಮೆರೆದಿದ್ದ ಕಾಲದಲ್ಲಿ ಅವನ ಹುಟ್ಟೂರು ಗೋಪಿನಾಥಂನಲ್ಲಿ ಮಕ್ಕಳಿಗೆ ಪಾಠ ಮಾಡಿದ ಸಾರ್ಥಕತೆ, ತಮಿಳು ಪ್ರಭಾವ ಹೆಚ್ಚಿರುವ ಕಡೆ ಕನ್ನಡದ ಕೆಲಸ ಮಾಡಿದ ತೃಪ್ತಿ ಇದೆ’.
ಇದು ಶಿಕ್ಷಕ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ 2023-24ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜರಾಗಿರುವ ಶಿಕ್ಷಕ ವಿ.ವೀರಪ್ಪ ಅವರ ಮನದಾಳದ ಮಾತು. ವಿಜಯವಾಣಿ ದಿನಪತ್ರಿಕೆ ಸೋಮವಾರ ಹನೂರಿನಲ್ಲಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, 1992ರಲ್ಲಿ ಯಾರೊಬ್ಬ ಶಿಕ್ಷಕರು ಭಯದಿಂದ ಗೋಪಿನಾಥಂ ಶಾಲೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸಲಿಲ್ಲ. ಇದನ್ನು ತಿಳಿದು ದೃಢ ನಿರ್ಧಾರದೊಂದಿಗೆ ಗೋಪಿನಾಥಂ ಶಾಲೆಯನ್ನು ಆಯ್ಕೆ ಮಾಡಿಕೊಂಡೆ. ಆದರೆ, ಗ್ರಾಮಕ್ಕೆ ತೆರಳಿದ ವೇಳೆ ಚಿಕ್ಕದಾದ ಕಟ್ಟಡದಲ್ಲಿ ಪೊಲೀಸರು ವಾಸಿಸುತ್ತಿದ್ದರು. ಮಕ್ಕಳು ಮನೆಯಲ್ಲಿ ಕಾಲ ಕಳೆಯುತ್ತಿದ್ದರು. ಮನೆ-ಮನೆಗೆ ತೆರಳಿ 23 ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಂಡು ಅರಣ್ಯ ಇಲಾಖೆಯ ಆವರಣದ ಮರದ ಕೆಳಗೆ ಪಾಠ, ಪ್ರವಚನ ಮಾಡಲಾಗುತ್ತಿತ್ತು, 1993ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 65ಕ್ಕೇರಿತು ಎಂದು ಸ್ಮರಿಸಿದರು.
ತಮಿಳುನಾಡಿನ ಗಡಿಯಂಚಿನಲ್ಲಿರುವ ಗೋಪಿನಾಥಂ ಗ್ರಾಮದಲ್ಲಿ ತಮಿಳು ಭಾಷಿಗರ ಸಂಖ್ಯೆ ಹೆಚ್ಚಾಗಿತ್ತು. ಈ ಹಿನ್ನೆಲೆ 1-4ನೇ ತರಗತಿಯವರೆಗೆ ತಮಿಳು ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಆದರೆ, ಆ ಶಾಲೆಗೆ ನಾನು ಕನ್ನಡ ಶಿಕ್ಷಕನಾಗಿ ನಿಯೋಜನೆಗೊಂಡು ಕನ್ನಡ ಮಾಧ್ಯಮದ ಶಿಕ್ಷಣದ ಮಹತ್ವದ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಯಿತು. ಆದರೆ ಗ್ರಾಮಸ್ಥರು ಕನ್ನಡ ಮಾಧ್ಯಮ ಶಿಕ್ಷಣವನ್ನು ತಿರಸ್ಕರಿಸಿ ವಿರೋಧ ವ್ಯಕ್ತಪಡಿಸಿದರು. 5-7ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯುವ ಸಂಬಂಧ ಅಂದಿನ ಡಿಡಿಪಿಐ ಗೋವಿಂದೇಗೌಡ ಅವರ ಗಮನಕ್ಕೆ ತಂದು ಕನ್ನಡದಲ್ಲೇ ಪಾಠ, ಪ್ರವಚನ ಆರಂಭಿಸಲಾಯಿತು. ಬಳಿಕ ಅಂದಿನ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರಲ್ಲಿ ಶಾಲೆಯನ್ನು ಕನ್ನಡ ಮಾಧ್ಯಮ ಶಾಲೆಯನ್ನಾಗಿ ಮಾಡುವಂತೆ ವರದಿ ಸಲ್ಲಿಸಿದ ಪರಿಣಾಮ ಸಂಪೂರ್ಣ ಕನ್ನಡ ಮಾಧ್ಯಮ ಶಾಲೆಯಾಯಿತು. ಈ ಶಾಲೆಯಲ್ಲಿ ಶಿಕ್ಷಣ ಪಡೆದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧೆಡೆ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ವಿ.ವೀರಪ್ಪ ಅವರ ಸೇವಾ ಪರಿಚಯ:
ಹನೂರಿನ ಶಾಗ್ಯ ಗ್ರಾಮದ ಇವರು ಮಲೆಮಹದೇಶ್ವರ ಬೆಟ್ಟದ ತಂಬಡಿಗೇರಿ ಕಾಲನಿಯಲ್ಲಿ ವಾಸವಿದ್ದಾರೆ. 1992ರಲ್ಲಿ ಸೇವೆಗೆ ಸೇರಿದ ಇವರು ಕರ್ನಾಟಕ ಗಡಿಭಾಗದ ಗ್ರಾಮ ಗೋಪಿನಾಥಂ ಸರ್ಕಾರಿ ಶಾಲೆಯಲ್ಲಿ 6 ವರ್ಷ, ಆಣೆಹೊಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 6 ವರ್ಷ, ಗೊರಸಾಣೆ ಸ.ಕಿ.ಪ್ರಾ ಶಾಲೆಯಲ್ಲಿ 14 ವರ್ಷ ಹಾಗೂ ಪ್ರಭಾರ ಮುಖ್ಯ ಶಿಕ್ಷಕರಾಗಿ ತುಳಸಿಕೆರೆ ಸ.ಕಿ.ಪ್ರಾ ಶಾಲೆಯಲ್ಲಿ 2 ವರ್ಷ ಸೇವೆ ಸಲ್ಲಿಸಿದ್ದು, ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದ ಬಳಿಕ ಮತ್ತೆ ಗೋಪಿನಾಥಂ ಸ.ಹಿ.ಪ್ರಾ. ಶಾಲೆಯಲ್ಲಿ 4 ವರ್ಷ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ (ಪ್ರಶಸ್ತಿಗೆ ಸೂಚಿಸಿರುವ ಶಾಲೆ) ಪ್ರಸ್ತುತ ಬಸಪ್ಪನ ದೊಡ್ಡಿ ಶಾಲೆಯಲ್ಲಿ ಕಳೆದ 2 ತಿಂಗಳಿನಿಂದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
*ನಾನು ಯಾವುದೇ ಫಲಾಪೇಕ್ಷೆ ಇಲ್ಲದೇ ಸಂಪೂರ್ಣವಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ವೃತ್ತಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದೇನೆ. ಈ ದಿಸೆಯಲ್ಲಿ ಕಳೆದ ವರ್ಷ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಇದೀಗ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ.ವಿ.ವೀರಪ್ಪ, ಮುಖ್ಯಶಿಕ್ಷಕ, ಬಸಪ್ಪನದೊಡ್ಡಿ, ಹನೂರು