ಶಿಕ್ಷಕರಲ್ಲಿ ಸೇವಾ ಮನೋಭಾವ ಕೊರತೆ

oppo_2
oppo_2
Published on

ಹನೂರು: ಸೇವಾ ಮನೋಭಾವ ಉದ್ದೇಶದಿಂದ ತೆರೆಯಲಾಗಿರುವ ಮಠದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಮೈಸೂರು ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ ಹಾಗೂ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕೃಪಾ ಎಜುಕೇಷನ್ ಸೊಸೈಟಿ ವತಿಯಿಂದ ಬುಧವಾರ ಸಂಸ್ಥೆಯ ಶಿಕ್ಷಕರಿಗೆ ಆಯೋಜಿಸಿದ್ದ ಪುನಶ್ಚೇತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪೈಪೋಟಿಯ ಕಾರಣದಿಂದಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಅಷ್ಟು ಸುಲಭದ ಮಾತಲ್ಲ. ಈ ಹಿಂದೆ ಮಠಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಸೇವಾ ಮನೋಭಾವದಿಂದ ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡಲಾಗುತ್ತಿತ್ತು. ಅದರಂತೆ ಸಿಬ್ಬಂದಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೀಗ ಕೆಲವರಲ್ಲಿ ಕೊರತೆ ಎದ್ದು ಕಾಣುತ್ತಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ಶ್ರಮಿಸಬೇಕು. ಇದರ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳು ನಿಂತಿವೆ ಎಂದರು.

ಜೀವನದಲ್ಲಿ ಸಾಧನೆ ಮಾಡಬೇಕಾದರೆ ಬದುಕು ನಶ್ವರ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಇದರಿಂದ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಅರ್ಧದಷ್ಟು ಬಗೆಹರಿಸಿದಂತಾಗುತ್ತದೆ. ಇದರಿಂದ ಉತ್ತಮ ಪ್ರತಿಫಲ ಸಿಗುತ್ತದೆ. ಹಾಗೆಯೇ ಧಾರ್ಮಿಕ, ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕತೆ ಎನಿಸುತ್ತದೆ. ಹಾಗಾಗಿ ಇದರಲ್ಲಿ ಶ್ರದ್ಧೆ ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಬಹುತೇಕರಲ್ಲಿ ಇದರ ಕೊರತೆ ಇರುವುದು ವಿಪರ್ಯಾಸ. ಆದ್ದರಿಂದ ಮೊದಲು ಇದನ್ನು ಬಿಡಬೇಕು. ನೈತಿಕತೆಯಲ್ಲಿ ಕಾಯಕದ ಅರಿವನ್ನು ಹೊಂದಬೇಕು. ಇದರಿಂದ ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಳ್ಳುವುದರ ಮೂಲಕ ಉತ್ತಮ ಜೀವನವನ್ನು ಕಟ್ಟಿಕೊಳ್ಳಬಹುದು ಎಂದು ಹೇಳಿದರು.

ಸಾಲೂರು ಬ್ರಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಮಾತನಾಡಿ, ಶ್ರೀ ರಾಮಕೃಷ್ಣರು ಹೇಳುವಂತೆ ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿ ಹಾಗೂ ಜ್ಞಾನಗಳೆರಡೂ ಮಾರ್ಗಗಳೆನಿಸುತ್ತವೆ. ರಾಮಕೃಷ್ಣರ ಭಾವಚಿತ್ರ ರಾಮಕೃಷ್ಣರನ್ನೇ ನೆನಪಿಗೆ ತರುವಂತೆ ಪ್ರತಿಮಾ ಪೂಜೆಯ ಉಪಾಸನೆಯಿಂದ ಸತ್ಯದ ರೂಪ ಉದ್ಧೀಪನವಾಗುತ್ತದೆ. ವೈದ್ಯನ ಸಂಪರ್ಕದಿಂದಷ್ಟೇ ನಮಗೆ ಕಫದ ನಾಡಿ, ಪಿತ್ತದ ನಾಡಿಗಳ ಪರಿಚಯ ಆಗುವುದು. ಅಂತೆಯೆ ಯಾವುದೇ ಸಾಧನಾ ಜೀವನಕ್ಕೂ ಸಿದ್ಧರಿಲ್ಲದ ಸಾಮಾನ್ಯರು ದೇವರನ್ನು ತೋರಿಸಿ ಎಂದು ಹಪಹಪಿಸಿದರೂ ಮಹಾತ್ಮರು ಏಕಾಏಕಿ ತೋರಿಸಲಾರರು. ಅಧ್ಯಯನ, ಅಧ್ಯಾಪನೆಯಿಂದಲೇ ಸತ್ಯದ ಸ್ವರೂಪನ್ನು ಅನ್ವೇಷಣೆಗೊಳಿಸಿಕೊಳ್ಳಬೇಕಿದೆ ಎಂದರು.

ಗುರು ಮತ್ತು ಹಿರಿಯರ ಆದರ್ಶ ಮತ್ತು ಮಾರ್ಗದರ್ಶನವಿಲ್ಲದೆ ಯಾವುದೇ ವ್ಯಕ್ತಿ ತನ್ನ ನಿಶ್ಚಿತ ಗುರಿ ಸಾಧಿಸಲು ಸಾಧ್ಯವಿಲ್ಲ. ಯಶಸ್ಸು ಅನ್ನುವುದು ಮರೀಚಿಕೆಯಂತೆ. ನೀವು ಅದರ ಹಿಂದೆ ಓಡಿದಷ್ಟು ಅದು ನಿಮ್ಮಿಂದ ದೂರ ಓಡುತ್ತದೆ. ಫಲದ ಅಪೇಕ್ಷೆ ಇಲ್ಲದೆ ಕರ್ಮ ಮಾಡಿದರೆ ಕೆಲಸಕ್ಕೆ ಯಶಸ್ಸು ಸಿಗಲಿದೆ. ಜೀವನದಲ್ಲಿ ಸಫಲತೆ ಕಾಣಲು ಎಲ್ಲರೂ ಬಯಸ್ತಾರೆ. ಒಂದೇ ಸಮನೆ ಕೆಲಸ ಮಾಡಿದರೆ ಸಾಲದು. ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಆ ಕೆಲಸ ಖಂಡಿತ ಯಶಸ್ವಿಯಾಗುತ್ತದೆ. ಆದ್ದರಿಂದ ಶಿಕ್ಷಕರು ಈ ಶಿಬಿರದ ಪ್ರಯೋಜನ ಪಡೆದುಕೊಂಡು ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಮುಡಿಗುಂಡ ಮಠದ ಶ್ರೀಕಂಠ ಸ್ವಾಮೀಜಿ ಮಾತನಾಡಿ, ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಇವರ ಪಾತ್ರ ಅಪಾರ. ದೀಪ ತಾನು ಬೆಳಗುತ್ತಿದ್ದರೆ ಮಾತ್ರ ಮತ್ತೊಂದು ದೀಪವನ್ನು ಬೆಳಗಿಸಲು ಸಾಧ್ಯ ಎನ್ನುವ ಹಾಗೆ ಶಿಕ್ಷಕರಿಗೆ ಪುನಶ್ಚೇತನ ಅಗತ್ಯವಿದೆ ಎಂಬುದನ್ನು ಮನಗಂಡು ಶ್ರೀ ಮಠದ ವತಿಯಿಂದ ಶಿಕ್ಷಕರಿಗೆ ಶಿಬಿರ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಮಾತನಾಡಿ, ಪ್ರತಿ ವ್ಯಕ್ತಿಗೂ ಮೂಲಭೂತವಾಗಿ ಆಹಾರ, ಶಿಕ್ಷಣ ಅಗತ್ಯ. ಹಸಿದು ಬರುವವರಿಗೆ ದಾಹ ನೀಗಿಸುವ ತಾಣ ಕರ್ನಾಟಕ. ಇದಕ್ಕೆ ಬಸವಣ್ಣನವರ ಪರಿಕಲ್ಪನೆಯೇ ಕಾರಣವಾಗಿದೆ. ಈ ದಿಸೆಯಲ್ಲಿ ಮಠಗಳಲ್ಲಿ ದಾಸೋಹ ಹಾಗೂ ಕಾಯಕದ ಪರಂಪರೆ ಇಂದಿಗೂ ಉಳಿದಿದೆ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಠಗಳ ಕೊಡುಗೆ ಅಪಾರ ಎಂದರು.

ಮಾಹಿತಿ ಸಂವಹನ: ಮೂರು ದಿನಗಳ ಕಾಲ ನಡೆದ ಪುನಶ್ಚೇತನ ಶಿಬಿರದಲ್ಲಿ ಸಂವಹನ ಕೌಶಲ, ಜೀವ ವಿಕಸನ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಿಕೆ, ಶಾಲಾ ಕಾಲೇಜು ಹಂತದ ಕಾರ್ಯವೈಖರಿ, ಬದಲಾವಣೆಯಲ್ಲಿ ನಮ್ಮ ಬದುಕು ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇನ್ನಿತರ ವಿಚಾರದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡಲಾಯಿತು.

ಗೌರವ ಸಮರ್ಪಣೆ : ಶ್ರೀ ಶರತ್‌ಚಂದ್ರ ಸ್ವಾಮೀಜಿ, ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಶ್ರೀ ಮಲೆಮಹದೇಶ್ವರ ಸ್ವಾಮಿ ಕೃಪಾ ಎಜುಕೇಷನ ಸೊಸೈಟಿ, ಪ್ರಾಧಿಕಾರ, ಮಾನಸ ಶಿಕ್ಷಣ ಸಂಸ್ಥೆ, ಬೇಡಗಂಪಣ ಸಮುದಾಯ ಹಾಗೂ ಮಠದ ಭಕ್ತರಿಂದ ಸನ್ಮಾನಿಸಲಾಯಿತು. ಶಿಬಿರಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಾಧ್ಯಾಪಕ ಡಾ.ಶರ್ಮ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್, ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ದೇಗುಲದ ಪ್ರಧಾನ ಆಗಮಿಕ ಕರವೀರ ಸ್ವಾಮಿ, ಬೇಡಗಂಪಣ ಅರ್ಚಕ ಕೆ.ವಿ.ಮಾದೇಶ್, ಪ್ರಾಂಶುಪಾಲ ಪ್ರಭುಸ್ವಾಮಿ, ಪೊನ್ನಾಚಿ ಮಹದೇವಸ್ವಾಮಿ, ಪುಟ್ಟಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net