ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮ ಪಾಲಿಸಲಿ

Published on

ಹನೂರು: ಹೆಲ್ಮೆಟ್ ಜೀವ ರಕ್ಷಕ ಸಾಧನ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದರ ಜತೆಗೆ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಹನೂರು ಠಾಣೆ ಎಎಸ್‌ಐ ಕೃಷ್ಣ ತಿಳಿಸಿದರು.

ಪಟ್ಟಣ ಪೊಲೀಸ್ ಠಾಣೆ ವತಿಯಿಂದ ಸುಗಮ ಸಂಚಾರ ಹಾಗೂ ಅಪಘಾತ ತಡೆಗಟ್ಟುವ ಸಂಬಂಧ ಬುಧವಾರ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸದಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಥಳೀಯರು ಹೆಲ್ಮೆಟ್ ಧರಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಕಾರಣದಿಂದಲೇ ಕಳೆದ 2-3 ತಿಂಗಳಿಂದ ಹನೂರು ಭಾಗದಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರರು ಹೆಚ್ಚು ಮೃತಪಟ್ಟಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಮದ್ಯ ಸೇವಿಸಿ ವಾಹನ ಚಲಾಯಿಸುವುದು, ವಾಹನಗಳ ವಿಮೆ ನವೀಕರಣ ಮಾಡಿಸದಿರುವುದು, ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು, ಅಪ್ರಾಪ್ತರಿಗೆ ವಾಹನ ಚಾಲನೆಗೆ ನೀಡುವುದು ಸಂಚಾರ ಸುರಕ್ಷತಾ ನಿಯಮ ಉಲ್ಲಂಘನೆಯಾದಂತೆ. ಆದ್ದರಿಂದ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸುವುದರ ಮೂಲಕ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿ ಚೈತ್ರಾ, ಆನಂದ್ ನಾಯಕ್, ಅಜಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net