

ಹನೂರು: ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾಭೂಮಿಗೆ ತೆರಳುತ್ತಿರುವ ಪ್ರತಿಯೊಬ್ಬರೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಹಾಗೂ ಚಿಂತನೆಗಳ ಬಗ್ಗೆ ಇನ್ನಷ್ಟು ಜ್ಞಾನವನ್ನು ಹೊಂದವಂತಾಗಬೇಕು ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಗುರುವಾರ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಅಂಬೇಡ್ಕರ್ ಅವರ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಅಂಬೇಡ್ಕರ್ ಅವರು ಅಸ್ಪಶ್ಯತೆ ತೊಡೆದು ಹಾಕುವುದರ ಮೂಲಕ ದೇಶದ ಸಮಾನತೆಗಾಗಿ ಸಂವಿಧಾನವನ್ನು ಕೊಡುಗೆ ನೀಡಿದ ಧೀಮಂತ ನಾಯಕ. ಇವರ ಚಿಂತನಾಶೀಲತೆಯ ದೂರದೃಷ್ಟಿ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿವರ್ಷ ತಾಲೂಕಿನಿಂದ ಅಂಬೇಡ್ಕರ್ ಅವರ ದೀಕ್ಷಾಭೂಮಿ ಯಾತ್ರೆಯನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಜನರು ಅಂಬೇಡ್ಕರ್ ಅವರು ಹೊಂದಿದ್ದ ನಿಲುವು ಹಾಗೂ ಜೀವನ ಚರಿತ್ರೆಯನ್ನು ಇನ್ನಷ್ಟು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಆದ್ದರಿಂದ ಯಾತ್ರೆಗೆ ತೆರಳುತ್ತಿರುವ ಎಲ್ಲರ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದರು.
ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ವಸಂತ್‌ಕುಮಾರ್ ಮಾತನಾಡಿ, ಇಲಾಖೆಯಿಂದ ಪ್ರತಿ ವರ್ಷ ಡಾ.ಬಿ.ಆರ್. ಅಂಬೇಡ್ಕರ್ ಅವರ ದೀಕ್ಷಾಭೂಮಿ ಯಾತ್ರೆ ಕೈಗೊಳ್ಳಲಾಗುತ್ತಿದೆ. ಈ ವರ್ಷ ಹನೂರು ತಾಲೂಕಿನಿಂದ ನೋಂದಾಯಿಸಿಕೊಂಡಿದ್ದ 86 ಜನರನ್ನು ಯಾತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಪ್ರಕಾಶ್, ನಿಂಗರಾಜು, ಮಧುಸೂದನ್, ರವಿ, ಯಾತ್ರಿಗಳಾದ ಪ್ರಭುಸ್ವಾಮಿ, ಪುಟ್ಟಸ್ವಾಮಿ, ನಿರಂಜನ್, ಸದಾಶಿವ, ಸಿ.ಮಹದೇವ, ವಸಂತ್‌ಕುಮಾರ್, ಮರಿಸ್ವಾಮಿ, ಮೂರ್ತಿ, ಭಾಗ್ಯಾ, ಹೇಮಾಮಾಲಿನಿ, ಸರೋಜಾ ಇತರರಿದ್ದರು.