ಶಿಲಾಯುಗದ ಸಮಾಧಿಗಳ ಉತ್ಖನನ ಆರಂಭ

03 HANUR 2
Published on

ಹನೂರು: ತಾಲೂಕಿನ ರಾಮಾಪುರ ಹೋಬಳಿಯ ದೊಡ್ಡಲತ್ತೂರಿನ ಆದಿಶಕ್ತಿ ಮಾರಮ್ಮ ದೇಗುಲ ಸಮೀಪದ ಗುಡ್ಡದಲ್ಲಿನ ಶಿಲಾಯುಗದ ಸಮಾಧಿಗಳ ಉತ್ಖನನಕ್ಕೆ ಗುರುವಾರ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಸಭೆಯಲ್ಲಿ ಎನ್.ಕೆ. ಲೋಕನಾಥ್ ಮಾತನಾಡಿ, ನಾವು ಎಷ್ಟೇ ಓದಿದರೂ ಪೂರ್ವಜರು ಹಾಗೂ ಹಳ್ಳಿಯ ಜನರ ಜೀವನ, ವೈಶಿಷ್ಟೃವನ್ನು ತಿಳಿದುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇದಕ್ಕೆ ಪೂರ್ವಜರು ಯಾವ ರೀತಿ ಜೀವನ ನಡೆಸಿದರು? ಅಂದಿನ ಸಂಸ್ಕೃತಿ ಯಾವ ರೀತಿ ಇತ್ತು? ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲದಿರುವುದೇ ಕಾರಣವಾಗಿದೆ. ಆದ್ದರಿಂದ ದಾಖಲೆಯನ್ನು ಹೊಂದಬೇಕಾದರೆ ತ್ರಾಸದಾಯಕ ಕೆಲಸವಾದರೂ ಸಂಶೋಧನೆ ಅತ್ಯಗತ್ಯ. ನಿಖರ ಫಲಿತಾಂಶವನ್ನು ಪಡೆಯುವುದರ ಮೂಲಕ ದಾಖಲೆಯನ್ನು ಹೊಂದಬಹುದಾಗಿದೆ. ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರ ಜತೆಗೆ ಮುಂದಿನ ಪೀಳಿಗೆಗೆ ಮಾಹಿತಿಯನ್ನು ಒದಗಿಸುತ್ತದೆ ಎಂದರು.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಹಾಗೂ ಬೆಂಗಳೂರು ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಸಂಶೋಧನೆ ಕೈಗೊಂಡಿರುವುದು ಮೆಚ್ಚುವ ಸಂಗತಿ. ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸುವುದರ ಮೂಲಕ ಉತ್ತಮ ಫಲಿತಾಂಶ ದೊರೆಯಲಿ. ಈ ಉತ್ಖನನ ವಿಶ್ವವಿದ್ಯಾನಿಲಯಕ್ಕೆ ಕೀರ್ತಿ ತರುತ್ತದೆ ಎಂದು ಶುಭಹಾರೈಸಿದರು.

2 ತಿಂಗಳ ಕಾಲ ಸಂಶೋಧನೆ: ಮೈಸೂರು ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಕ್ಷೆ, ಉತ್ಖನನದ ನಿರ್ದೇಶಕಿಯೂ ಆದ ಡಾ.ವಿ. ಶೋಭಾ ಮಾತನಾಡಿ, ಕಳೆದ 2 ವರ್ಷದಿಂದ ಹನೂರು ಭಾಗದ ಬೂದಿಪಡಗದಲ್ಲೂ ಶಿಲಾಯುಗದ ಸಮಾಧಿಯ ಬಗ್ಗೆ ಸಂಶೋಧನೆ ನಡೆಸಲಾಗಿತ್ತು. ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಿದಾಗ ಹೆಚ್ಚು ಸಮಾಧಿಗಳಿರುವುದು ಪತ್ತೆಯಾಯಿತು. ಹಾಗಾಗಿ, ಸಿ. ಕೃಷ್ಣಮೂರ್ತಿ ಅವರ ವರದಿ ಆಧಾರದ ಮೇಲೆ ದೊಡ್ಡಲತ್ತೂರಿನಲ್ಲಿ ಸಂಶೋಧನೆಯನ್ನು ಕೈಗೊಳ್ಳಲಾಗಿದ್ದು, ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ಸಂಶೋಧನೆ ಒಂದು ಸಾಹಸ ಹಾಗೂ ಕಷ್ಟದ ಕೆಲಸವಾಗಿದ್ದು, 2 ತಿಂಗಳು ಕೈಗೊಳ್ಳುವ ಈ ಕಾರ್ಯಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಕೋರಿದರು.

ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜು ಮಾತನಾಡಿ, 114 ವರ್ಷಗಳ ಇತಿಹಾಸ ಹೊಂದಿರುವ ಮಿಥಿಕ್ ಸೊಸೈಟಿ ದೇಶದ ಇತಿಹಾಸ, ಪರಂಪರೆಯನ್ನು ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿದ್ದು, ಕೈಗೊಂಡಿರುವ ಉತ್ಖನನಕ್ಕೆ ಸಂಪೂರ್ಣ ಸಹಕಾರ ನೀಡಲಾಗಿದೆ. ಪೂರ್ವಜರ ಜೀವನಕ್ರಮದ ಬಗ್ಗೆ ಬೆಳಕು ಚೆಲ್ಲಲಿರುವ ಈ ಕಾರ್ಯ ಪುರಾತತ್ವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಅನುಕೂಲವಾಗಲಿದೆ. ಜತೆಗೆ ದಾಖಲೆಯನ್ನು ಒದಗಿಸುತ್ತದೆ ಎಂದರು.

ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಎಸ್.ರವಿ, ಉತ್ಖನನದ ಸಹ ನಿರ್ದೇಶಕ ಸಿ.ಬಿ. ಪಾಟೀಲ್, ಕೇಂದ್ರ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಉದಯಶಾಸ್ತ್ರಿ, ವಿಶ್ವಕೋಶ ವಿಭಾಗದ ನಿವೃತ್ತ ಮುಖ್ಯಸ್ಥ ಕೃಷ್ಣೇಗೌಡ, ಪ್ರಾಧ್ಯಾಪಕರಾದ ಲೋಕೇಶ್, ಅನಿಲ್, ಶಶಿ, 45 ವಿದ್ಯಾರ್ಥಿಗಳು, ಇತರರು ಇದ್ದರು.

ಬೃಹತ್ ಶಿಲಾಯುಗ
ದಕ್ಷಿಣ ಭಾರತದಲ್ಲಿ ಕಿ.ಪೂ. 1200 ರಿಂದ ಕ್ರಿ.ಶ. 300ರವರೆಗಿನ ಕಾಲವನ್ನು ಬೃಹತ್ ಶಿಲಾಯುಗವೆಂದು ಕರೆಯಲಾಗುತ್ತದೆ. ಈ ಕಾಲದಲ್ಲಿ ಮನುಷ್ಯ ಕಬ್ಬಿಣದ ಬಳಕೆಯನ್ನು ಆರಂಭಿಸಿದ ಕಾರಣಕ್ಕೆ ಕಬ್ಬಿಣದ ಯುಗ ಎಂದೂ ಹೇಳಲಾಗುತ್ತದೆ. 1961ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣದ ಸಿ. ಕೃಷ್ಣಮೂರ್ತಿ ಅವರು ಹನೂರು ತಾಲೂಕಿನ ದೊಡ್ಡಲತ್ತೂರಿನಲ್ಲಿ ಬೃಹತ್ ಶಿಲಾಯುಗದ ಸಮಾಧಿಗಳನ್ನು ಪತ್ತೆ ಮಾಡಿದ್ದರು. ಅವರು ನಿಧನರಾದ ಹಿನ್ನೆಲೆಯಲ್ಲಿ ಉತ್ಖನನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮೈಸೂರು ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಬೆಂಗಳೂರು ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಉತ್ಖನನ ಕೈಗೊಳ್ಳಲು ನಿರ್ಧರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net