ಮೂಲ ಸೌಕರ್ಯ ಕಲ್ಪಿಸಲು ಮನವಿ

oppo_2
oppo_2
Published on

ಹನೂರು: ಗ್ರಾಮಕ್ಕೆ ಸಮರ್ಪಕ ರಸ್ತೆ ಹಾಗೂ ವಿದ್ಯುತ್ ಸೌಕರ್ಯ ಒದಗಿಸಿ ಕೊಡುವಂತೆ ಶನಿವಾರ ತಾಲೂಕಿನ ದೊಡ್ಡಾಣೆಯ ಬೇಡಗಂಪಣ ಅರ್ಚಕರು ಶಾಸಕ ಎಂ.ಆರ್. ಮಂಜುನಾಥ್ ಅವರಲ್ಲಿ ಮನವಿ ಮಾಡಿದರು.

ಮ.ಬೆಟ್ಟದ ಮಾದಪ್ಪನ ಸನ್ನಿಧಿಗೆ ಶಾಸಕರು ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಭೇಟಿಯಾದ ಬೇಡಗಂಪಣ ಅರ್ಚಕರು ಮಾತನಾಡಿ, ಕಳೆದ ಹಲವು ದಶಕಗಳಿಂದಲೂ ಅರಣ್ಯ ಪ್ರದೇಶದೊಳಗಿರುವ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ. ಆದರೆ ರಸ್ತೆ ಇಲ್ಲ. ಇದರಿಂದ ಅನಾರೋಗ್ಯಕ್ಕೆ ತುತ್ತಾದರೆ ರೋಗಿಯನ್ನು ಡೋಲಿ ಕಟ್ಟಿಕೊಂಡು ಕಲ್ಲುಮುಳ್ಳಿನ ಹಾದಿಯಲ್ಲಿ ಆಸ್ಪತ್ರೆಗೆ ಹೊತ್ತು ತರಬೇಕಿದೆ. ಇನ್ನು ಹೆರಿಗೆ ನೋವು ಕಾಣಿಸಿಕೊಂಡರೆ ವಿಧಿಯಿಲ್ಲದೇ ಗರ್ಭೀಣಿಯನ್ನು ಕಾಡು ಪ್ರಾಣಿಗಳ ಹಾವಳಿ ನಡುವೆಯೂ ಕರೆದೊಯ್ಯಬೇಕಿದ್ದು, ನರಕಯಾತನೆ ಅನುಭವಿಸುವಂತಾಗಿದೆ. ಇತ್ತ ವಿದ್ಯುತ್ ಸೌಕರ್ಯವಿಲ್ಲದೆ ಬೆಂಕಿ ಬೆಳಕಿನಲ್ಲಿ ಅಡುಗೆ ತಯಾರಿಸಬೇಕಿದ್ದು, ರಾತ್ರಿಯನ್ನು ಕತ್ತಲೆಯಲ್ಲೇ ಕಳೆಯಬೇಕಿದೆ. ಮೂಲ ಸೌಕರ್ಯದಿಂದ ವಂಚಿತರಾಗಿದ್ದೇವೆ. ಇದರಿಂದ ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದ್ದು, ಈ ಬಗ್ಗೆ ಗಮನಹರಿಸಿ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.

ಇದಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಪ್ರತಿಕ್ರಿಯಿಸಿ, ಶ್ರೀ ಮಹದೇಶ್ವರರು ಬೇಡಗಂಪಣರನ್ನು ಪರಿವರ್ತಿಸಿದ ಪವಾಡ ಪುರುಷ. ನಿಮ್ಮ ಸಮುದಾಯಕ್ಕೆ ಪೂಜಾ ಕೈಂಕರ್ಯ ನೆರವೇರಿಸುವ ಭಾಗ್ಯ ದೊರೆತಿರುವುದು ನಿಜಕ್ಕೂ ಮೆಚ್ಚುವ ಸಂಗತಿ. ಆದರೆ, ಹಲವು ದಶಕಗಳಿಂದಲೂ ವಾಸಿಸುತ್ತಿದ್ದರೂ ಮೂಲ ಸೌಕರ್ಯ ಕಲ್ಪಿಸಲಾಗದಿರುವುದು ಬೇಸರದ ಸಂಗತಿ. ಈ ಬಗ್ಗೆ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದ್ದು, ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧದ ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಬಳಿಕ ಕಾರ್ಯರೂಪಕ್ಕೆ ಬರಲಿದೆ. ಜತೆಗೆ ರಸ್ತೆ ಕಲ್ಪಿಸುವ ಸಲುವಾಗಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಮುತುರ್ವಜಿ ವಹಿಸಲಾಗಿದೆ. ಆದ್ದರಿಂದ ಹಂತಹಂತವಾಗಿ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದರ ಮೂಲಕ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು.

ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಉಪ ಕಾರ್ಯದರ್ಶಿ ಚಂದ್ರುಶೇಖರ್, ಪಾರುಪತ್ತೆಗಾರ ಮಹದೇವಸ್ವಾಮಿ, ಬೇಡಗಂಪಣ ಅರ್ಚಕರಾದ ಮಾದಯ್ಯ ತಂಬಡಿ, ಒಡೆಯರ ತಂಬಡಿ, ಮಾದಯ್ಯ, ಲೋಕೇಶ್, ಮಹದೇವಸ್ವಾಮಿ, ಮಾದೇವ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net