ವಿದ್ಯಾರ್ಥಿಗಳನ್ನು ಗುರುತಿಸಿ ಕ್ರೀಡಾಸಕ್ತಿ ಬೆಳೆಸಿ

27 HANUR 1
Published on

ಹನೂರು: ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವುದರ ಜತೆಗೆ ಕ್ರೀಡೆಯಲ್ಲಿ ಸಾಧನೆ ಮಾಡುವಂತೆ ಉತ್ತೇಜನ ನೀಡಬೇಕು ಎಂದು ಮೈಸೂರು ವಿಭಾಗೀಯ ದೈಹಿಕ ಶಿಕ್ಷಣ ಉಪ ನಿರ್ದೇಶಕ ಎ.ಪರಶುರಾಮಪ್ಪ ತಿಳಿಸಿದರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರ ತ್ರೈಮಾಸಿಕ ಕಾರ್ಯಾಗಾರದಲ್ಲಿ ಮಾತನಾಡಿದರು. ಹನೂರು ಭಾಗದ ಶಾಲೆಗಳಲ್ಲಿ ಕ್ರೀಡೆಗೆ ಉತ್ತಮ ವಾತಾವರಣ ಇರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅದೇ ರೀತಿ ದೈಹಿಕ ಶಿಕ್ಷಣ ಶಿಕ್ಷಕರು ಉತ್ತಮ ತರಬೇತಿ ನೀಡುತ್ತಿದ್ದಾರೆ. ಇದರಿಂದ ಜಿಲ್ಲಾ, ವಿಭಾಗೀಯ ಹಾಗೂ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದು ಹೇಳಿದರು.

ಕೆಲವು ವಿದ್ಯಾರ್ಥಿಗಳು ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದು ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಆದ್ದರಿಂದ ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಕ್ರೀಡಾಸಕ್ತಿ ಬೆಳೆಸಬೇಕು. ಇಚ್ಛೆಗೆ ಅನುಗುಣವಾಗಿ ಆಸಕ್ತಿ ಹೊಂದುವ ಕ್ರೀಡೆಯಲ್ಲಿ ಭಾಗವಹಿಸಲು ಅಗತ್ಯ ತರಬೇತಿ ನೀಡಬೇಕು. ಮಕ್ಕಳೊಂದಿಗೆ ಉತ್ತಮ ಒಡನಾಟ ಹೊಂದಬೇಕು. ಇದರಿಂದ ವಿದ್ಯಾರ್ಥಿಗಳು ತಾನಾಗಿಯೇ ಕ್ರೀಡೆಯ ಬಗ್ಗೆ ಒಲವು ಹೊಂದುತ್ತಾರೆ. ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಸಂಘ ರಚನೆ: ಬಳಿಕ ತಾಲೂಕು ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘವನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಧರ್ಮಲಿಂಗಂ, ಉಪಾಧ್ಯಕ್ಷರಾಗಿ ಪ್ರದೀಪ್‌ಕುಮಾರ್, ಕಾರ್ಯದರ್ಶಿಯಾಗಿ ಸೆಂದಿಲ್‌ಕುಮಾರ್, ಖಜಾಂಚಿಯಾಗಿ ಕೊಳಂದೈರಾಜು ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಮಹಾದೇವ, ತಾಲೂಕು ಗ್ರೇಡ್ -1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆಂಪರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net