ಸ್ತ್ರೀ ಅಬಲೆಯಲ್ಲ ಸಬಲೆ

oppo_2
oppo_2
Published on

ಹನೂರು: ಹೆಣ್ಣು ಅಶಕ್ತಳಲ್ಲ, ಸಶಕ್ತಳು. ಏನನ್ನಾದರೂ ಸಾಧಿಸಬಲ್ಲಳು ಎನ್ನುವುದಕ್ಕೆ ಪೂರಕವೆಂಬಂತೆ ಪದವಿ ಶಿಕ್ಷಣ ಪಡೆದ ಮಹಿಳೆಯೊಬ್ಬರು ಸಂಪೂರ್ಣ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದಾರೆ.

ಹನೂರು ತಾಲೂಕಿನ ಉದ್ದನೂರು ಗ್ರಾಮದ ಉಮೇಶ್ ಪತ್ನಿ ಚಂದ್ರಮ್ಮ ಕೃಷಿಯಲ್ಲಿ ಸಶಕ್ತಳಾದ ಮಹಿಳೆ. ಕೊಳ್ಳೇಗಾಲದ ನಿವಾಸಿಯಾಗಿದ್ದ ಇವರು ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ವಸಂತಕುಮಾರಿ ಬಾಲಕಿಯರ ಪಪೂ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಹಾಗೂ ಜೆಎಸ್‌ಎಸ್ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದು, 2008ರಲ್ಲಿ ಆಟೋ ಚಾಲನಾ ವೃತ್ತಿ ಮಾಡಿಕೊಂಡಿದ್ದ ಹನೂರು ತಾಲೂಕಿನ ಉದ್ದನೂರು ಗ್ರಾಮದ ಉಮೇಶ್ ಅವರನ್ನು ವಿವಾಹವಾದರು. ಇವರಿಗೆ ಶಾಲಾ, ಕಾಲೇಜಿನ ರಜೆ ದಿನಗಳಲ್ಲಿ ತಂದೆ, ತಾಯಿಯೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿ ವ್ಯವಸಾಯದ ಅನುಭವ ಪಡೆದುಕೊಂಡಿದ್ದರು. ಆದರೆ, ಸಂಪೂರ್ಣ ಕೃಷಿಯಲ್ಲಿ ತೊಡಗಲು ಸಾಧ್ಯವಾಗಿರಲಿಲ್ಲ. ವಿವಾಹವಾದ ಕೆಲ ವರ್ಷಗಳ ಬಳಿಕ ಕುಟುಂಬದ ನಿರ್ವಹಣೆ ಕಷ್ಟವಾಯಿತು. ಉಮೇಶ್ ಅವರ ತಂದೆ, ತಾಯಿ ಕೃಷಿ ಮಾಡುತ್ತಿದ್ದ ಜಮೀನು ಪಾಳು ಬಿಟ್ಟಿದ್ದನ್ನು ಅರಿತ ಚಂದ್ರಮ್ಮ ಕೃಷಿ ಮಾಡಲು ಮುಂದಾದರು. ಈ ಬಗ್ಗೆ ಪತಿ ಸಲಹೆ ಪಡೆದು 2 ವರ್ಷಗಳಿಂದ ಕೃಷಿ ಕಾಯಕಕ್ಕೆ ಧುಮುಕಿದರು. ಇದಕ್ಕೆ ಪತಿಯೂ ಸಂಪೂರ್ಣ ಸಹಕಾರ ನೀಡಿದರು.

ಆರಂಭದಲ್ಲಿ ಕೃಷಿಯಲ್ಲಿ ನಷ್ಟ ಅನುಭವಿಸಬೇಕಾಯಿತು. ಆದರೆ, ಎದೆಗುಂದದ ಇವರು ದೃಢ ನಿರ್ಧಾರ ಹೊಂದಿ ಕೃಷಿಯಲ್ಲಿ ಯಶಸ್ಸು ಗಳಿಸಬೇಕು. ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಪಣ ತೊಟ್ಟರು. ಬಳಿಕ ಕೃಷಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಶ್ರಮ ವಹಿಸಿ ದುಡಿಯಲು ಆರಂಭಿಸಿದರು. ಇದೀಗ ಉತ್ತಮ ಇಳುವರಿಯೊಂದಿಗೆ ವಿವಿಧ ಬೆಳೆಗಳನ್ನು ಬೆಳೆಯುವುದರ ಮೂಲಕ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ಬದುಕು ರೂಪಿಸಿದ ಕೃಷಿ:
ಪತಿ ಉಮೇಶ್ ಅವರ ಪಿತ್ರಾರ್ಜಿತ ಆಸ್ತಿಯಾದ 3 ಎಕರೆ ಜಮೀನು ಈ ಹಿಂದೆ ಮಳೆಯಾಶ್ರಿತ ಖುಷ್ಕಿ ಭೂಮಿಯಾಗಿತ್ತು. ಬಳಿಕ ಬೋರ್ ಕೊರೆಸಲಾಯಿತು. ಆರಂಭದಲ್ಲಿ ಇವರು ಪತಿಯ ಸಹಕಾರದೊಂದಿಗೆ ಆಲೂಗಡ್ಡೆ, ಮುಸುಕಿನ ಜೋಳ ಹಾಗೂ ತೊಗರಿಯನ್ನು ಬೆಳೆದರು. ಆದರೂ, ಕೊಂಚ ಅನುಭವದ ಕೊರತೆಯಿಂದ ನಷ್ಟವನ್ನು ಎದುರಿಸಬೇಕಾಯಿತು. ಬಳಿಕ ಶುದ್ಧ ನೀರು ಸರಬರಾಜು ಯಂತ್ರವನ್ನು ಅಳವಡಿಸಿ ಹನಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ಬಳಕೆ ಮಾಡಿದರು. ಬೆಳೆಗಳಿಗೆ ರೋಗಭಾದೆ ತಗುಲದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿದರು. ಇದರಿಂದ ಉತ್ತಮ ಇಳುವರಿಯೊಂದಿಗೆ ವಿವಿಧ ಬೆಳೆಗಳನ್ನು ಬೆಳೆದರು. ಉತ್ತಮ ಆದಾಯದಿಂದ ಕುಟುಂಬದ ನಿರ್ವಹಣೆಯೂ ಸುಲಭವಾಯಿತು. ಇದರಿಂದ ಕೃಷಿಯ ಬಗ್ಗೆ ಆಸಕ್ತಿ ಇನ್ನಷ್ಟು ಹೆಚ್ಚಾಯಿತು. ಬಳಿಕ ಬಾಳೆ, ಬೀಟ್‌ರೂಟ್ ಹಾಗೂ ಇನ್ನಿತರ ಬೆಳೆ ಬೆಳೆದು ಯಶಸ್ಸು ಕಂಡರು. ಪ್ರಸ್ತುತ ಜಮೀನಿನಲ್ಲಿ 1 ಎಕರೆಯಲ್ಲಿ ಬಾಳೆ ಬೆಳೆದಿದ್ದು, ಗೊನೆಗಳು ಕಟಾವಿನ ಹಂತಕ್ಕೆ ಬಂದಿದೆ. ಹಾಗೆಯೇ ಅರ್ಧ ಎಕರೆಯಲ್ಲಿ ಸಮೃದ್ಧಿಯಿಂದ ಕೂಡಿರುವ ಮುಸುಕಿನ ಜೋಳದ ಫಸಲು ಸಹ ಕಟಾವಿಗೆ ಬಂದಿದೆ. ಇನ್ನರ್ಧ ಎಕರೆಯಲ್ಲಿ ರಾಗಿ ಫಸಲು ಹುಲುಸಾಗಿ ಬಂದಿದೆ. ಇನ್ನುಳಿದ ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ಭೂಮಿಯನ್ನು ಹದಗೊಳಿಸಿದ್ದಾರೆ. ಹಾಗಾಗಿ, ಕೃಷಿ ಇವರ ಕೈ ಹಿಡಿದಿದ್ದು, ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ತೋರಿಸಿ ಇತರರಿಗೆ ಮಾದರಿ ಎನಿಸಿದ್ದಾರೆ.

ಪತಿ, ಪುತ್ರ ಸಾಥ್:
ಕೃಷಿಯ ಬಗ್ಗೆ ಇನ್ನಿಲ್ಲದ ಆಸಕ್ತಿ ವಹಿಸಿದ ಇವರಿಗೆ ಆಟೋ ಚಾಲನೆ ವೃತ್ತಿಯಲ್ಲಿರುವ ಪತಿ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವುದರ ಮೂಲಕ ಸಂಪೂರ್ಣ ಸಹಕಾರ ನೀಡುತ್ತಿದ್ದರೆ, ಇತ್ತ ಪುತ್ರ ಚೇತನ್ ಶಾಲಾ ರಜೆ ದಿನಗಳಲ್ಲಿ ಕೃಷಿಗೆ ಸಂಪೂರ್ಣ ಸಾಥ್ ನೀಡುತ್ತಿದ್ದಾರೆ. ಇದರಿಂದ ಇವರ ಕೃಷಿಗೆ ಮತ್ತಷ್ಟು ಉತ್ತೇಜನ ಸಿಕ್ಕಿದಂತಾಗಿದೆ. ಇದರಿಂದ ಕೃಷಿಯಲ್ಲಿ ಯಶಸ್ಸು ಗಳಿಸಲು ಇದು ಒಂದು ಮುಖ್ಯ ಕಾರಣವಾಗಿದೆ.

ಹೈನುಗಾರಿಕೆಯತ್ತಲೂ ಒಲವು:
ಕೃಷಿಯಲ್ಲಿ ಉತ್ತಮ ಅನುಭವ ಪಡೆದಿರುವ ಇವರಿಗೆ ಜಮೀನಿನಲ್ಲಿರುವ 90ಕ್ಕೂ ಹೆಚ್ಚು ತೆಂಗಿನ ಮರದಿಂದ ವಾರ್ಷಿಕವಾಗಿ ಉತ್ತಮ ಆದಾಯವೂ ಬರುತ್ತಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎನ್ನುವ ಉದ್ದೇಶದಿಂದ ಇವರು ಹೈನುಗಾರಿಕೆಯತ್ತಲೂ ಒಲವು ತೋರಿದರು. ಎರಡು ವರ್ಷಗಳ ಹಿಂದೆ 4 ಮೇಕೆಗಳನ್ನು ಖರೀದಿಸಿ ಸಾಕಲು ಆರಂಭಿಸಿದರು. ಪ್ರತ್ಯೇಕ ಶೆಡ್ ನಿರ್ಮಿಸಿ ಅಗತ್ಯ ಶ್ರಮವಹಿಸಿದ ಪರಿಣಾಮ ಮೇಕೆಗಳ ಸಂಖ್ಯೆ ಹೆಚ್ಚಾಯಿತು. ಇದೀಗ ಇದರ ಸಂಖ್ಯೆ 35ಕ್ಕೇರಿದೆ. ಮುಂದಿನ ದಿನಗಳಲ್ಲಿ ಹಸುಗಳ ಸಾಕಣೆಯ ಬಗ್ಗೆ ಚಿಂತನೆ ನಡೆಸಿದ್ದಾರೆ.
ಒಟ್ಟಾರೆ ಹೇಳುವುದಾದರೆ ಶಿಕ್ಷಣದಿಂದಲೇ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂಬುದಿಲ್ಲ. ಬದಲಾಗಿ ಕೃಷಿಯಲ್ಲೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಚಂದ್ರಮ್ಮ ಅವರೇ ನಿದರ್ಶನ.

ನಾನು ಪದವಿ ಶಿಕ್ಷಣ ಪಡೆದಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಹುಡುಕಿಕೊಳ್ಳಬಹುದಿತ್ತು. ಆದರೆ, ನನಗೆ ಹಿಂದಿನಿಂದಲೂ ಕೃಷಿ ಬಗ್ಗೆ ಆಸಕ್ತಿ ಇದ್ದ ಕಾರಣ ಪತಿಯ ಸಹಕಾರದಿಂದ ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೇನೆ. ಈ ಕಾಯಕ ನೆಮ್ಮದಿಯನ್ನು ತಂದು ಕೊಟ್ಟಿದ್ದು, ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಇದಕ್ಕೆ ಪತಿ, ಪುತ್ರ ಬೆನ್ನೆಲುಬಾಗಿದ್ದಾರೆ.ಚಂದ್ರಮ್ಮ, ಪದವೀಧರ ರೈತ ಮಹಿಳೆ, ಉದ್ದನೂರು ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net