

ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಗ್ರಾಮ ಪಾಲಾರ್‌ನಲ್ಲಿ ಬುಧವಾರ ಸಂಜೆ ಮನೆ ನಿರ್ಮಾಣ ಸಂಬಂಧ ಉಪ ವಲಯ ಅರಣ್ಯಾಧಿಕಾರಿಯೊಬ್ಬರು ಗಿರಿಜನರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಪಾಲಾರ್ ವನ್ಯಜೀವಿ ವಲಯದ ಭೋಜಪ್ಪ ಲೋಕಯುಕ್ತರಿಗೆ ಸಿಕ್ಕಿ ಬಿದ್ದ ಉಪ ವಲಯ ಅರಣ್ಯಾಧಿಕಾರಿ. ಪಾಲಾರ್‌ನಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಸರ್ಕಾರದಿಂದ 18 ಮನೆಗಳು ಮಂಜೂರಾಗಿತ್ತು. ಆದರೆ, ಮನೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಡ್ಡಿಪಡಿಸಿದ್ದರು. ಡಿಆರ್‌ಎಫ್‌ಒ ಭೋಜಪ್ಪ ಅವರು ಪ್ರತಿಯೊಬ್ಬರಿಂದ ತಲಾ 1 ಸಾವಿರ ರೂ.ನಂತೆ 15 ಸಾವಿರ ರೂ. ನೀಡುವಂತೆ ಗಿರಿಜನರಿಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮನೆ ಫಲಾನುಭವಿ ಗ್ರಾಮದ ಮುರುಗೇಶ್ ಎಂಬುವರು ಚಾಮರಾಜನಗೆರ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಸಂಜೆ ವಸತಿ ಗೃಹದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಭೋಜಪ್ಪ ಗಿರಿಜನರಿಂದ ಲಂಚ ಪಡೆಯುವ ವೇಳೆಯೇ ಸಿಕ್ಕಿ ಬಿದ್ದಿದ್ದು, ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಲೋಕಯುಕ್ತ ಡಿವೈಎಸ್ಪಿ ಮ್ಯಾಥುವ್ ಥಾಮಸ್, ಇನ್ಸ್‌ಪೆಕ್ಟರ್ ಶಶಿಕುಮಾರ್, ಪೇದೆಗಳಾದ ಗೌತಮ್, ಮಹಾಲಿಂಗಸ್ವಾಮಿ, ಮಹಾದೇವಸ್ವಾಮಿ ಇನ್ನಿತರರು ಭಾಗವಹಿಸಿದ್ದರು.