

ಹನೂರು : ತಾಲೂಕಿನ ಮಣಗಳ್ಳಿ ಸಮೀಪದ ಗುರುಗಳ ದೊಡ್ಡಿಯ ಉರಿಲಿಂಗಿ ಪೆದ್ದಿ ಶಾಖಾ ಮಠಕ್ಕೆ ನೀರಿನ ಸೌಕರ್ಯ ಕಲ್ಪಿಸುವ ಸಲುವಾಗಿ ಶನಿವಾರ ಕೊಳವೆ ಬಾವಿ ಕೊರೆಯುವುದಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಸಮ್ಮುಖದಲ್ಲಿ ಪೂಜೆ ನೆರವೇರಿಸಿದರು.
ಈ ವೇಳೆ ಶಾಸಕರು ಮಾತನಾಡಿ, ಗ್ರಾಮದಲ್ಲಿ ಶಾಖಾ ಮಠಕ್ಕೆ ಹೆಚ್ಚಿನ ಜನರು ಆಗಮಿಸುತ್ತಾರೆ. ಆದರೆ ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇತ್ತು. ಇದರಿಂದ ಜನರು ತುಂಬ ತೊಂದರೆ ಅನುಭವಿಸುತ್ತಿದ್ದರು. ಮಠಕ್ಕೆ ಕೊಳವೆ ಬಾವಿ ಕೊರೆಸುವುದರ ಮೂಲಕ ನೀರಿನ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಬೋರ್ ಕೊರೆಸುವುದಕ್ಕೆ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸೌಕರ್ಯ ದೊರಕಲಿದ್ದು, ಜನರಿಗೆ ಅನುಕೂಲವಾಗಲಿದೆ. ಜತೆಗೆ ಗ್ರಾಮಕ್ಕೆ ಹಂತ ಹಂತವಾಗಿ ಅಗತ್ಯ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಬೋರ್ ಕೊರೆಸಲು ಮುಂದಾಗಿದ್ದಕ್ಕೆ ಗ್ರಾಮಸ್ಥರು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ಮುಡುಕುತೊರೆ ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಹನೂರು ಪಿಎಸಿಸಿ ನಿರ್ದೇಶಕ ಮಂಜೇಶ್‌ಗೌಡ, ಪಪಂ ಮಾಜಿ ಸದಸ್ಯ ಬಸವರಾಜು, ಮುಖಂಡರಾದ ಶಿವರಾಮೇಗೌಡ, ಮಹಾದೇವ, ರಾಜು, ತಮ್ಮಯ್ಯಗೌಡ, ವೆಂಕಟೇಶ್, ಅತೀಕ್ ಹಾಗೂ ಇನ್ನಿತರರು ಇದ್ದರು.