ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆಗೆ ಸ್ವಾಗತ

oppo_2
oppo_2
Published on

ಹನೂರು: ಮಳವಳ್ಳಿಯಿಂದ ಹನೂರಿಗೆ ಆಗಮಿಸಿದ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆಗೆ ಭಾನುವಾರ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ರೈತ ಹಾಗೂ ಕನ್ನಡಪರ ಸಂಘಟನೆಗಳಿಂದ ಅದ್ದೂರಿ ಸ್ವಾಗತ ದೊರೆಯಿತು.

ಪಟ್ಟಣದ ಕೃಷಿ ಮಾರುಕಟ್ಟೆ ಆವರಣಕ್ಕೆ ಆಗಮಿಸಿದ ರಥಯಾತ್ರೆಗೆ ಮಹಿಳೆಯರು ಕುಂಭ ಕಳಸದೊಂದಿಗೆ ತಾಯಿ ಭುವನೇಶ್ವರಿ ದೇವಿಗೆ ಪುಷ್ಪ ನಮನ ಅರ್ಪಿಸಿ ಪೂಜೆ ಸಲ್ಲಿಸಿದರು. ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಧಿಕಾರಿಗಳು, ಶಾಲಾ ಮಕ್ಕಳು, ಕನ್ನಡಪರ, ರೈತ ಹಾಗೂ ಮಹಿಳಾ ಸಂಘಟನೆಗಳ ಸದಸ್ಯರು ಕನ್ನಡಾಂಬೆಯ ಜಯಘೋಷ ಮೊಳಗಿಸಿದರು.
ಮ.ಬೆಟ್ಟದ ಮುಖ್ಯ ರಸ್ತೆ, ಬಸ್ ನಿಲ್ದಾಣದ ವೃತ್ತದ ಮೂಲಕ ಹೊರಟ ಜ್ಯೋತಿ ರಥಯಾತ್ರೆಯ ಮೆರವಣಿಗೆಯು ಬಂಡಳ್ಳಿ ಮುಖ್ಯ ರಸ್ತೆ ಹಾಗೂ ಲೊಕ್ಕನಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಚರಿಸಿತು.

ಮೆರವಣಿಗೆಯಲ್ಲಿ ಕನ್ನಡ ಬಾವುಟ ರಾರಾಜಿಸಿದವು. ಕನ್ನಡ ಬಾವುಟ ಕಟ್ಟಿದ ಆಟೋಗಳು ಕೂಡ ಹಿಂದೆ ಸಾಗಿದವು. ಕನ್ನಡ ಹಾಡಿನ ವಾದ್ಯದ ತಾಳಕ್ಕೆ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿದರು. ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಪ್ರಭಾರ ಆರ್‌ಐ ಶೇಷಣ್ಣ, ಕನ್ನಡಪರ ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ಕೂಡ ಹೆಜ್ಜೆಹಾಕಿದರು.

ಕನ್ನಡ ನೆಲವನ್ನು ಕಾಪಾಡಬೇಕು:
ಮೆರವಣಿಗೆಗೆ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಚಾಲನೆ ನೀಡಿ ಮಾತನಾಡಿ, ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನೆಲೆ ನಾಡಿನ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಜನರಲ್ಲಿ ಅದರಲ್ಲೂ ಯುವಕರಲ್ಲಿ ಕರ್ನಾಟಕದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸರ್ಕಾರ ರಾಜ್ಯಾದ್ಯಂತ ಜ್ಯೋತಿ ರಥಯಾತ್ರೆಯ ಮೂಲಕ ಮೆರವಣಿಗೆ ಹಮ್ಮಿಕೊಂಡಿದೆ. ಪ್ರತಿಯೊಬ್ಬರೂ ಕನ್ನಡಾಭಿಮಾನವನ್ನು ಹೊಂದುವ ಮೂಲಕ ನೆಲ, ಜಲ ಹಾಗೂ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು.

ಬಿಇಒ ಗುರುಲಿಂಗಯ್ಯ ಮಾತನಾಡಿ, 1973ರಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣಗೊಳಿಸಿದರು. ಇದೀಗ 50 ವರ್ಷ ಕಳೆದಿದೆ. ಹಾಗಾಗಿ ಹಂಪಿಯಿಂದ ಹೊರಟಿರುವ ಕರ್ನಾಟಕ ಜ್ಯೋತಿ ರಥಯಾತ್ರೆ ರಾಜ್ಯದ ಗಡಿ ಹನೂರು ತಾಲೂಕಿಗೆ ಆಗಮಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ನಾಡಿನ ಚರಿತ್ರೆ ಹಾಗೂ ನಡೆದು ಬಂದ ದಾರಿಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜತೆಗೆ ಕನ್ನಡ ನಾಡಿನ ಏಳಿಗೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net